ದರ್ಶನ್‌ಗೆ ಮತ್ತೆ ಜೈಲೂಟವೇ ಗತಿ: ಮನೆ ಊಟ ಕೋರಿದ ಅರ್ಜಿ ವಿಚಾರಣೆ ಮುಂದೂಡಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ದರ್ಶನ್‌ಗೆ ಮತ್ತೆ ಜೈಲೂಟವೇ ಗತಿಯಾಗಿದೆ.

ಮನೆ ಊಟಕ್ಕೆ ಅವಕಾಶ ಕಲ್ಪಿಸಲು ಕೇಂದ್ರ ಕಾರಾಗೃಹ ಮೇಲ್ವಿಚಾರಕರಿಗೆ ನಿರ್ದೇಶಿಸಬೇಕು ಎಂದು ದರ್ಶನ್‌ ಕೋರಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜುಲೈ 29ಕ್ಕೆ ಮುಂದೂಡಲಾಗಿದೆ.

ದರ್ಶನ್ ಪರ ವಕೀಲ ಫಣೀಂದ್ರ ವಾದ ಮಂಡಿಸಿ, ವಿಚಾರಣಾಧೀನ ಕೈದಿಗಳಿಗೆ ಖಾಸಗಿ ಸೋರ್ಸ್‌ನಿಂದ ಅಗತ್ಯ ವಸ್ತುಗಳನ್ನು ಪಡೆಯಲು ಅವಕಾಶವಿದೆ. ಕಾರಗೃಹ ಕಾಯ್ದೆಯಲ್ಲಿ ಅದಕ್ಕೆ ಅವಕಾಶ ಇದೆ. ವಿಚಾರಣಾಧಿನ ಕೈದಿ, ಶಿಕ್ಷೆಗೆ ಗುರಿಯಾಗದ ಕೈದಿಗೂ ಮನೆಯ ಊಟ, ಹಾಸಿಗೆ ನೀಡಲು ಜೈಲು ಮ್ಯಾನ್ಯುಯಲ್‌ನಲ್ಲಿ ಅವಕಾಶ ಇದೆ ಎಂದು ಹೇಳಿದರು.

ಊಟವನ್ನು ಸ್ನೇಹಿತರು, ಕುಟುಂಬಸ್ಥರ ಬಳಿ ಪಡೆಯಲು ಜೈಲ್ ಎಸ್ಪಿ, ಐಜಿಪಿ ಚೆಕ್ ಮಾಡಬೇಕು ಅಂತ ನಿಯಮ ಇದೆ. ಅದಲ್ಲದೇ ಆ ಆಹಾರದಿಂದ ತೊಂದರೆಯಾದರೆ ಅದಕ್ಕೆ ಅವರೇ ಕಾರಣ ಇರುತ್ತಾರೆ ಎಂದು ಬಾಂಬೆ ಹೈಕೋರ್ಟ್‌ನ ಅಸ್ಕರ್ ಯೂಸಫ್ ಪ್ರಕರಣದ ಆದೇಶವನ್ನು ಉಲ್ಲೇಖಿಸಿದರು.

ಈ ವೇಳೆ ಪ್ರತಿಕ್ರಿಯಿಸಿದ ಜಡ್ಜ್‌ ಎಸ್.ಆರ್. ಕೃಷ್ಣಕುಮಾರ್, ನೀವು ಆಹಾರ, ಹಾಸಿಗೆ ಮೂಲಭೂತ ಹಕ್ಕು ಎನ್ನುತ್ತಿದ್ದೀರಿ. ಆದರೆ ನಾನು ಈಗ ಮಧ್ಯಂತರ ಆದೇಶ ಮಾಡಲು ಸಾಧ್ಯವಿಲ್ಲ. ಸಂಪೂರ್ಣ ಪ್ರಕರಣದ ವಿಚಾರಣೆ ಮಾಡಬೇಕು. ವಿಚಾರಣಾಧೀನ ಕೈದಿ ಇದ್ದಾಗ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಅಧಿಕಾರ ಇದೆ. ಅಲ್ಲಿ ಮೊದಲು ಅರ್ಜಿ ಸಲ್ಲಿಸಿ ಅವಕಾಶ ಕೋರಬೇಕು. ಅಲ್ಲಿ ನಿರಾಕರಣೆಯಾದರೆ, ಮುಂದೆ ನೋಡೋಣ ಎಂದು ಹೇಳಿ, ಮುಂದಿನ ವಿಚಾರಣೆ 29ಕ್ಕೆ ಮುಂದೂಡಿದರು.

ಜೈಲೂಟದಿಂದಾಗಿ ಫುಡ್‌ ಪಾಯಿಸನಿಂಗ್‌ ಹಾಗೂ ಅತಿಸಾರ ಆಗುತ್ತಿದೆ. ಹೀಗಾಗಿ ಮನೆಯೂಟ ತರಿಸಿಕೊಳ್ಳಲು ಅನುಮತಿ ನೀಡುವಂತೆ ದರ್ಶನ್‌ ಮನವಿ ಮಾಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!