ಹೊಸದಿಗಂತ ಡಿಜಿಟಲ್ ಡೆಸ್ಕ್:
ರಜನೀಕಾಂತ್ ನಟನೆಯ ‘ಜೈಲರ್‘ (Jailer) ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದ್ದು, ಕನ್ನಡದ ಸ್ಟಾರ್ ನಟ ಶಿವರಾಜ್ ಕುಮಾರ್ ಅಲ್ಲದೇ ಅನೇಕ ಸ್ಟಾರ್ ನಟರುಗಳು ಈ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ .
ಆದರೆ ಇದೀಗ ಸಿನಿಮಾದ ಹೆಸರು ವಿವಾದಕ್ಕೆ ಕಾರಣವಾಗಿದೆ. ಸಿನಿಮಾದ ಹೆಸರು ಬದಲಿಸುವಂತೆ ನೆರೆಯ ಚಿತ್ರರಂಗದವರಿಂದ ಒತ್ತಾಯ ಕೇಳಿಬಂದಿದೆ.
ಮಲಯಾಳಂ ಚಿತ್ರರಂಗದ ನಿರ್ಮಾಪಕ ಹಾಗೂ ನಿರ್ದೇಶಕರೊಬ್ಬರು ಸಿನಿಮಾದ ಹೆಸರಿನ ಬಗ್ಗೆ ತಕರಾರು ತೆಗೆದಿದ್ದು ಸಿನಿಮಾದ ಹೆಸರು ಬದಲಿಸುವಂತೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿ ಸಹ ಮಾಡಿ ಸಿನಿಮಾದ ಹೆಸರನ್ನು ಬದಲಾಯಿಸಬೇಕು, ಕನಿಷ್ಟ ಕೇರಳದಲ್ಲಿಯಾದರೂ ಬೇರೆ ಹೆಸರಿನೊಂದಿಗೆ ಸಿನಿಮಾವನ್ನು ಬಿಡುಗಡೆ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ.
‘ಜೈಲರ್’ ಹೆಸರಿನ ಮಲಯಾಳಂ ಸಿನಿಮಾ ಒಂದು ಬಿಡುಗಡೆಗೆ ತಯಾರಾಗಿದೆ. ಮಲಯಾಳಂನ ‘ಜೈಲರ್’ ಸಿನಿಮಾದಲ್ಲಿ ಧ್ಯಾನ್ ಶ್ರೀನಿವಾಸನ್ ನಟಿಸಿದ್ದು ಸಿನಿಮಾವನ್ನು ಸಕ್ಕಿರ್ ಮದತ್ತಿಲ್ ನಿರ್ದೇಶನ ಮಾಡಿದ್ದಾರೆ. ಎನ್ಕೆ ಮೊಹಮ್ಮದ್ ನಿರ್ಮಾಣ ಮಾಡಿದ್ದಾರೆ. ತಮಿಳಿನ ‘ಜೈಲರ್’ ಹಾಗೂ ಮಲಯಾಳಂ ‘ಜೈಲರ್’ ಸಿನಿಮಾಗಳ ಕತೆಗಳು ಒಂದಕ್ಕೊಂದು ಬಹಳ ಭಿನ್ನವಾಗಿದೆಯಾದರೂ ಸಿನಿಮಾದ ಹೆಸರುಗಳು ಒಂದೇ ಆಗಿವೆ. ಹಾಗಾಗಿ ಮಲಯಾಳಂ ‘ಜೈಲರ್’ ಚಿತ್ರತಂಡ ತಮಿಳು ‘ಜೈಲರ್’ ಸಿನಿಮಾದ ನಿರ್ಮಾಣ ಸಂಸ್ಥೆಯಾದ ಸನ್ ಪಿಕ್ಚರ್ಸ್ ಗೆ ಮನವಿ ಮಾಡಿದ್ದು, ಕನಿಷ್ಟ ಕೇರಳದಲ್ಲಿಯಾದರೂ ಸಿನಿಮಾದ ಹೆಸರು ಬದಲಿಸಿ ಬಿಡುಗಡೆ ಮಾಡಿ ಎಂದಿದೆ.
‘ಜೈಲರ್’ ಸಿನಿಮಾದಲ್ಲಿ ರಜನೀಕಾಂತ್ ಅಂಥಹಾ ದೊಡ್ಡ ಸ್ಟಾರ್ ಜೊತೆಗೆ ಮಲಯಾಳಂನ ಸೂಪರ್ ಸ್ಟಾರ್ ಮೊಹನ್ಲಾಲ್ ಸಹ ನಟಿಸಿದ್ದಾರೆ. ಹಾಗಾಗಿ ಕೇರಳದಲ್ಲಿ ಸಿನಿಮಾದ ಹೆಸರು ಬದಲಾಯಿಸಿದರೆ ಸಮಸ್ಯೆ ಏನೂ ಆಗುವುದಿಲ್ಲ. ಆದರೆ ನಮ್ಮದು ಹಾಗಲ್ಲ, ನಾವು ಹೆಸರು ಇಟ್ಟು, ಅದೇ ಥೀಮ್ನಲ್ಲಿ ಸಿನಿಮಾ ಮಾಡಿದ್ದೇವೆ, ತಮಿಳಿನ ‘ಜೈಲರ್’ ಸಿನಿಮಾ ಬಿಡುಗಡೆ ಆದರೆ ನಮ್ಮ ಸಿನಿಮಾ ಬರುವ ಸಮಯಕ್ಕೆ ಜನರಿಗೆ ಗೊಂದಲವಾಗಲಿದೆ ಎಂದಿದ್ದಾರೆ. ಈ ವಿಚಾರವಾಗಿ ನಾವು ಸನ್ ಪಿಕ್ಚರ್ಸ್ ಅನ್ನು ಸಂಪರ್ಕ ಮಾಡಿದ್ದೇವೆ ಆದರೆ ಅವರು ಪ್ರತಿಕ್ರಿಯೆ ನೀಡಿಲ್ಲ ಎಂದಿದ್ದಾರೆ.
ಇದೀಗ ಸನ್ ಪಿಕ್ಚರ್ಸ್ನವರು ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, ”ಸನ್ ಪಿಕ್ಚರ್ಸ್ ಎಂಬುದು ಕಾರ್ಪೊರೇಟ್ ಸಂಸ್ಥೆಯಾಗಿದ್ದು, ‘ಜೈಲರ್’ ಸಿನಿಮಾವನ್ನು ನಾವು ದೊಡ್ಡ ಸ್ಟಾರ್ ನಟರು ಹಾಗೂ ಬಜೆಟ್ನೊಂದಿಗೆ ನಿರ್ಮಾಣ ಮಾಡಿದ್ದೇವೆ. ನಮ್ಮ ಆಪರೇಷನಲ್ ದೃಷ್ಟಿಯಿಂದ ಹಾಗೂ ಸಿನಿಮಾದ ಕತೆಯ ದೃಷ್ಟಿಯಿಂದ ನಾವು ಹೆಸರು ಬದಲಾಯಿಸಲು ಸಾಧ್ಯವಿಲ್ಲ” ಎಂದಿದೆ.
‘ಜೈಲರ್’ ಸಿನಿಮಾದಲ್ಲಿ ರಜನೀಕಾಂತ್ ಜೊತೆಗೆ ಶಿವರಾಜ್ ಕುಮಾರ್, ಮಲಯಾಳಂನ ಮೋಹನ್ಲಾಲ್, ಬಾಲಿವುಡ್ನ ಜಾಕಿ ಶ್ರಾಫ್, ತೆಲುಗಿನ ಸುನಿಲ್ ನಟಿಸಿದ್ದಾರೆ. ಇವರ ಜೊತೆಗೆ ತಮನ್ನಾ ನಾಯಕಿಯಾಗಿದ್ದಾರೆ. ಸಿನಿಮಾದ ಎರಡು ಹಾಡುಗಳು ಈಗಾಗಲೇ ಬಿಡುಗಡೆ ಆಗಿದೆ.