ಜೈನಮಠದ “ಮಾಧುರಿ” ವಂತಾರಕ್ಕೆ ಸ್ಥಳಾಂತರ: ಮಹಾರಾಷ್ಟ್ರ ಸರ್ಕಾರದಿಂದ ವಾಪಾಸ್ ಕರೆತರುವ ಭರವಸೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೊಲ್ಹಾಪುರದ ಪ್ರಸಿದ್ಧ ಜೈನಮಠದಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಇದ್ದ “ಮಾಧುರಿ” ಹೆಸರಿನ ಆನೆಯನ್ನು ಗುಜರಾತ್‌ನ ವಂತಾರ ಪ್ರಾಣಿ ರಕ್ಷಣಾ ಕೇಂದ್ರಕ್ಕೆ ಸ್ಥಳಾಂತರಿಸಿದ್ದಕ್ಕೆ ಮಹಾರಾಷ್ಟ್ರದ ಜೈನ ಸಮುದಾಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಸ್ಥಳಾಂತರ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತಂದಿದೆ ಎಂದು ಜೈನರು ಆರೋಪಿಸುತ್ತಿದ್ದು, ಆನೆಯನ್ನು ಮರಳಿ ಮಠಕ್ಕೆ ತರಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.

ಈ ಸಂಬಂಧ ವಿಧಾನಸಭೆಯ ಸಚಿವ ಪ್ರಕಾಶ್ ಅಬಿತ್ಕರ್ ಮಾಹಿತಿ ನೀಡಿದ್ದು, “ಭಾರತೀಯ ಜನತಾ ಪಕ್ಷದ ಸಂಸದ ಧನಂಜಯ ಮಹಾದಿಕ್ ಮತ್ತು ಶಿವಸೇನೆ ಸಂಸದ ಧೈರ್ಯಶೀಲ ಮಾನೆ ಅವರು ಈ ವಿಷಯದಲ್ಲಿ ಸುಪ್ರೀಂ ಕೋರ್ಟ್‌ಗೆ ಕೇಂದ್ರದಿಂದ ಅಫಿಡವಿಟ್ ಸಲ್ಲಿಸುವಂತೆ ಪ್ರಯತ್ನಿಸುತ್ತಿದ್ದಾರೆ. ವಂತಾರ ಕೇಂದ್ರದ ಅಧಿಕಾರಿಗಳು ಸಹ ಇದಕ್ಕೆ ಸಹಕಾರ ನೀಡುವ ಭರವಸೆ ನೀಡಿದ್ದಾರೆ,” ಎಂದು ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ: 36 ವರ್ಷದ ಆನೆ “ಮಾಧುರಿ” ಯ ಆರೋಗ್ಯ ಹದಗೆಟ್ಟಿದ್ದು, ಮಾನಸಿಕ ಸ್ಥಿತಿಯೂ ಬದಲಾಗಿರುವುದರಿಂದ ಬೇರೆಡೆ ಪುನರ್ವಸತಿ ನೀಡಬೇಕೆಂದು ಪ್ರಾಣಿದಯಾ ಸಂಸ್ಥೆಯು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಈ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ಜುಲೈ 16 ರಂದು ತೀರ್ಪು ನೀಡಿದ್ದು, ಆನೆಯನ್ನು ಗುಜರಾತ್‌ನ ವಂತಾರ ಕೇಂದ್ರಕ್ಕೆ ಕಳುಹಿಸಲು ಸೂಚನೆ ನೀಡಿತ್ತು. ನಂತರ ಸುಪ್ರೀಂ ಕೋರ್ಟ್ ಕೂಡ ಈ ತೀರ್ಪಿಗೆ ಬೆಂಬಲ ನೀಡಿತ್ತು.

ಆದರೆ ಜೈನ ಸಮುದಾಯ ಇದನ್ನು ಧಾರ್ಮಿಕ ವಿಚಾರವಾಗಿ ಪರಿಗಣಿಸಿ, ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಲವು ಮಂದಿ ಜಿಯೋ ಸಿಮ್‌ಗಳನ್ನು ಬದಲಾಯಿಸಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಈ ಆಕ್ರೋಶದ ಭಾಗವಾಗಿ 1.25 ಲಕ್ಷ ಜನರು ರಾಷ್ಟ್ರಪತಿಗೆ ಮನವಿ ಪತ್ರ ಕಳುಹಿಸಲು ಸಹಿ ಹಾಕಿದ್ದಾರೆ.

ಮಹಾದೇವಿ ಹೆಸರಿನ ಈ ಆನೆ ಮೊದಲು ಕರ್ನಾಟಕದಲ್ಲಿ ಜನಿಸಿ, 1992ರಲ್ಲಿ ಕೊಲ್ಹಾಪುರ ಜೈನಮಠಕ್ಕೆ ತರಲಾಗಿತ್ತು. ಬಳಿಕ 30 ವರ್ಷಗಳ ಕಾಲ ಮಠದಲ್ಲಿಯೇ ಆರೈಕೆ ಪಡೆಯುತ್ತಿದ್ದ ಈ ಆನೆ ಈಗ ಸಾರ್ವಜನಿಕ ಅಭಿಪ್ರಾಯದ ಕೇಂದ್ರಬಿಂದುವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!