ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೈನಮುನಿ (Belagavi Jain Monk) ಕೊಲೆ ಪ್ರಕರಣದ ಸದ್ದು ಇಂದು ವಿಧಾನ ಪರಿಷತ್ ನಲ್ಲೂ ಮೊಳಗಿದ್ದು, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಅಂತ ವಿಪಕ್ಷ ಬಿಜೆಪಿ ಪಟ್ಟು ಹಿಡೀತು. ಆದರೆ ಸರ್ಕಾರ ಮಾತ್ರ ಸಿಬಿಐ ತನಿಖೆ (CBI Investigation) ಇಲ್ಲ, ಪೊಲೀಸರ ತನಿಖೆ ಮಾಡಿಸಲಾಗುತ್ತೆ ಅಂತ ತಿಳಿಸಿತು.
ಅಧಿವೇಶನ ಪ್ರಾರಂಭ ಆದ ಕೂಡಲೇ ಬಿಜೆಪಿ (BJP) ಸದಸ್ಯ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ನಿಲುವಳಿ ಸೂಚನೆಗೆ ಮುಂದಾದರು. ಕೂಡಲೇ ಸಭಾಪತಿಗಳು ನಿಯಮ 68ರ ಅಡಿ ಚರ್ಚೆಗೆ ಅವಕಾಶ ಕೊಡೋದಾಗಿ ಹೇಳಿದ್ರು. ಬಳಿಕ ಪ್ರಶ್ನೋತ್ತರ ಕಲಾಪದ ವೇಳೆ ನಿಯಮ 68ರ ಅಡಿ ಚರ್ಚೆಗೆ ಅವಕಾಶ ನೀಡಲಾಯ್ತು.
ಈ ವೇಳೆ ಮಾತನಾಡಿದ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ, ಜೈನ ಮುನಿ ಕೊಲೆ ಪ್ರಕರಣ ತಲ್ಲಣಗೊಳಿಸಿದೆ. ಅಹಿಂಸೆ ಧರ್ಮ ಅನ್ನೋರ ಕೊಲೆ ಆಗಿದೆ.ವಿದ್ಯುತ್ ಶಾಕ್ ಕೊಟ್ಟು, 9 ತುಂಡು ಮಾಡಿದ್ದಾರೆ. ಸರ್ಕಾರ ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿಲ್ಲ. ನಿನ್ನೆಯವರೆಗೂ ಸಿಎಂ, ಗೃಹ ಸಚಿವರು ಸ್ಥಳಕ್ಕೆ ಹೋಗಿಲ್ಲ. ಜೈನಮುನಿ ಕೊಲೆ ಪ್ರಕರಣ ಸಿಬಿಐಗೆ ವಹಿಸಬೇಕು ಅಂತ ಒತ್ತಾಯ ಮಾಡಿದರು.
ಬಿಜೆಪಿಯ ರವಿಕುಮಾರ್ , ವೈಎ ನಾರಾಯಣಸ್ವಾಮಿ, ಛಲವಾದಿ ನಾರಾಯಣಸ್ವಾಮಿ, ತೇಜಸ್ವಿನಿಗೌಡ, ಹನುಮಂತ ನಿರಾಣಿ, ಸೇರಿ ಹಲವರು ಮಾತನಾಡಿ ಸಿಬಿಐ ತನಿಖೆಗೆ ಒತ್ತಾಯಿಸಿದರು. ಜೆಡಿಎಸ್ ನ ಶರವಣ, ಮರಿತಿಬ್ಬೇಗೌಡ, ಭೋಜೇಗೌಡ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದರು.
ಕಾಂಗ್ರೆಸ್ ನ ಜಗದೀಶ್ ಶೆಟ್ಟರ್, ಪ್ರಕಾಶ್ ಹುಕ್ಕೇರಿ ಪ್ರಕರಣದಲ್ಲಿ ರಾಜಕೀಯ ಬೇಡ ಅಂತ ಪೊಲೀಸರಿಂದಲೇ ತನಿಖೆ ನಡೆಸಿ ಅಂತ ಸರ್ಕಾರದ ಪರ ಮಾತನಾಡಿದರು.
ಕಾನೂನು ಸಚಿವ ಎಚ್.ಕೆ. ಪಾಟೀಲ್ ಮಾತನಾಡಿ (H. K Patil), ಇದೊಂದು ಹೇಯಕೃತ್ಯ. ನಾಗರೀಕ ಸಮಾಜ ತಲೆ ತಗ್ಗಿಸೋ ಘಟನೆ. 6 ಲಕ್ಷ ಸಾಲದ ವಿಚಾರ ಆರೋಪಿ ಪೊಲೀಸರಿಗೆ ಹೇಳಿದ್ದು. ಅದನ್ನ ಪೊಲೀಸರು ಹೇಳಿದ್ದಾರೆ. ತನಿಖೆ ಸರ್ಕಾರ ಮಾಡಿಸುತ್ತಿದೆ. ಇದನ್ನ ಗಂಭೀರ, ವಿಶೇಷ ಪ್ರಕರಣ ಅಂತ ಡಿಎಸ್‍ಪಿ ನೇತೃತ್ವದ ತನಿಖೆ ಮಾಡಿಸಲಾಗ್ತಿದೆ ಅಂತ ತಿಳಿಸಿದರು.
ಈ ಕೃತ್ಯ ಮಾಡಿದ ವ್ಯಕ್ತಿಗೆ ವಿಕೃತ ಮನಸು. ಮೃತ ದೇಹವನ್ನ ಕಟ್ ಮಾಡ್ತಾರೆ ಅಂದರೆ ಅವರಿಗೆ ಮನುಷ್ಯತ್ವದ ಗುಣ ಇಲ್ಲ. ಸಿಬಿಐಗೆ ಕೊಡಬೇಕು ಅಂತ ಹೇಳಿದ್ರು. ಯಾವ ಕಾರಣಕ್ಕೆ ಸಿಬಿಐಗೆ ಕೊಡಬೇಕು ಅಂತ ಪ್ರಶ್ನೆ ಮಾಡಿದ್ರು. ನಾವು ಯಾರ ರಕ್ಷಣೆ ಮಾಡುತ್ತಿಲ್ಲ. ಬಿಜೆಪಿ ಅವಧಿಯಲ್ಲಿ ಇದ್ದ ಅಧಿಕಾರಿಗಳೇ ತನಿಖೆ ಮಾಡ್ತಿದ್ದಾರೆ. ರಾಜಕೀಯ ಬೆರೆಸದೇ ಪ್ರಕರಣವನ್ನ ಖಂಡಿಸಿ. ಈ ಪ್ರಕರಣವನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸುತ್ತೆ. ಟೆಕ್ನಾಲಜಿ ಬಳಸಿಕೊಂಡು, ನಿಷ್ಠಾವಂತ ಅಧಿಕಾರಿ ನೇಮಕ ಮಾಡಿ ಪ್ರಕರಣ ತನಿಖೆ ಮಾಡಿಸುತ್ತೇವೆ. ಯಾರನ್ನೂ ನಮ್ಮ ಸರ್ಕಾರ ರಕ್ಷಣೆ ಮಾಡಲ್ಲ. ಯಾರೇ ವ್ಯಕ್ತಿಗಳು ಇದ್ದರೂ ತನಿಖೆ ಮಾಡಿ ನ್ಯಾಯ ಕೊಡಿಸುವ ಕೆಲಸ ಮಾಡಿಸ್ತೀವಿ ಅಂತ ಸಿಬಿಐ ತನಿಖೆ ನಿರಾಕರಿಸಿದರು.