ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ನಡೆದ ತೀವ್ರ ಗುಂಡಿನ ಚಕಮಕಿಯಲ್ಲಿ ಪಾಕಿಸ್ತಾನ ಮೂಲದ ಒಬ್ಬ ಉಗ್ರನನ್ನು ಭದ್ರತಾ ಪಡೆಗಳು ಹೊಡೆದುರುಳಿಸಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭಾರತೀಯ ಸೇನೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣೆ ತಂಡವು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿತ್ತು. ಕಥುವಾ ಜಿಲ್ಲೆಯ ಬಿಲ್ಲಾವರ್ ವಲಯದ ಪರ್ಹೇಟರ್ ಪ್ರದೇಶದಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿ ಲಭಿಸಿದ ಹಿನ್ನೆಲೆ, ಪಡೆಗಳು ಆ ಭಾಗವನ್ನು ಸುತ್ತುವರಿದು ಶೋಧ ಕಾರ್ಯ ಆರಂಭಿಸಿವೆ. ಈ ವೇಳೆ ಉಗ್ರರು ಗುಂಡಿನ ದಾಳಿ ನಡೆಸಿದಾಗ, ಭದ್ರತಾ ಪಡೆಗಳು ತಕ್ಕ ಪ್ರತಿಕ್ರಿಯೆ ನೀಡಿದ್ದು, ಚಕಮಕಿಯಲ್ಲಿ ಉಸ್ಮಾನ್ ಎಂಬ ಉಗ್ರ ಸಾವನ್ನಪ್ಪಿದ್ದಾನೆ.
ಮೃತ ಉಗ್ರನಿಂದ ಎಂ4 ಮಾದರಿಯ ಸ್ವಯಂಚಾಲಿತ ರೈಫಲ್ ಸೇರಿದಂತೆ ಹೆಚ್ಚಿನ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಸೇನೆಯ ರೈಸಿಂಗ್ ಸ್ಟಾರ್ ಕಾರ್ಪ್ಸ್ ಸಾಮಾಜಿಕ ಜಾಲತಾಣದ ಮೂಲಕ ಅಧಿಕೃತ ಮಾಹಿತಿ ಹಂಚಿಕೊಂಡಿದೆ.


