Thursday, September 11, 2025

ಮಾಸ್ಕೋದಲ್ಲಿ ಪುಟಿನ್‌ ಭೇಟಿಯಾದ ಜೈಶಂಕರ್‌: ಅಮೆರಿಕದ ‘ತೈಲ’ ಟೀಕೆಗೆ ಕೊಟ್ಟರು ಖಡಕ್ ಉತ್ತರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಇಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿ ಮಾಡಿದ್ದಾರೆ.

ಇದಕ್ಕೂ ಮೊದಲು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದ ಜೈಶಂಕರ್‌, ಎರಡೂ ದೇಶಗಳ ನಡುವಿನ ವ್ಯಾಪಾರ ಸಂಬಂಧಗಳನ್ನು ವಿಸ್ತರಿಸುವ ಕುರಿತು ಸುದೀರ್ಘ ಚರ್ಚೆ ನಡೆಸಿದರು. ಭಾರತದ ಮೇಲಿನ ಅಮೆರಿಕದ ಹೆಚ್ಚುವರಿ ಸುಂಕಗಳನ್ನು ಖಂಡಿಸಿರುವ ರಷ್ಯಾ, ಭಾರತದ ಉತ್ಪನ್ನಗಳಿಗೆ ರಷ್ಯನ್‌ ಮಾರುಕಟ್ಟೆ ತೆರೆಯುವುದಾಗಿ ಭರವಸೆ ನೀಡಿರುವದನ್ನು ಇಲ್ಲಿ ಸ್ಮರಿಸಬಹುದು.

ಈ ವೇಳೆ ಸರ್ಗೆಯ ಲಾವ್ರೊವ್‌ ಅವರೊಂದಿಗಿನ ಜಂಟಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಎಸ್.‌ ಜೈಂಶಕರ್‌,’ಎರಡನೇ ಮಹಾಯುದ್ಧದ ನಂತರ ಭಾರತ ಮತ್ತು ರಷ್ಯಾ ನಡುವಿನ ಸಂಬಂಧಗಳು ವಿಶ್ವದ ಪ್ರಮುಖ ಸಂಬಂಧಗಳಲ್ಲಿ ಅತ್ಯಂತ ಪ್ರಮುಖವಾಗಿದೆ ಎಂದು ನಾವು ನಂಬುತ್ತೇವೆ’ ಎಂದು ಹೇಳಿದ್ದಾರೆ.

‘ಭೌಗೋಳಿಕ-ರಾಜಕೀಯದ ಮೇಲೆ ಹಿಡಿತ, ನಾಯಕತ್ವ ಸಂಪರ್ಕಗಳು ಮತ್ತು ಜನಪ್ರಿಯ ಭಾವನೆಗಳು, ಭಾರತ-ರಷ್ಯಾ ಸಂಬಂಧದ ಪ್ರಮುಖ ಚಾಲಕ ಶಕ್ತಿ’ ಎಂದು ಜೈಶಂಕರ್‌ ಬಣ್ಣಿಸಿದ್ದಾರೆ.

ಇದೇ ವೇಳೆ ರಷ್ಯಾದ ಇಂಧನ ಖರೀದಿಸುತ್ತಿರುವುದರ ಬಗ್ಗೆ ಅಮೆರಿಕ ಮಾಡಿರುವ ಟೀಕೆಯನ್ನು ಎಸ್. ಜೈಶಂಕರ್ ಖಂಡಿಸಿದ್ದು, ಈ ವಾದದ ಹಿಂದಿನ ತರ್ಕ “ಗೊಂದಲಕಾರಿಯಾಗಿದೆ” ಎಂದು ಹೇಳಿದ್ದಾರೆ.

ನಾವು ರಷ್ಯಾದ ತೈಲದ ಅತಿದೊಡ್ಡ ಖರೀದಿದಾರರಲ್ಲ, ಅತಿ ಹೆಚ್ಚು ರಷ್ಯಾದಿಂದ ತೈಲ ಖರೀದಿಸುತ್ತಿರುವುದು ಚೀನಾ. ನಾವು ಎಲ್‌ಎನ್‌ಜಿಯ ಅತಿದೊಡ್ಡ ಖರೀದಿದಾರರಲ್ಲ, ಅದು ಯುರೋಪಿಯನ್ ಒಕ್ಕೂಟ. 2022ರ ನಂತರ ರಷ್ಯಾದೊಂದಿಗೆ ಅತಿದೊಡ್ಡ ವ್ಯಾಪಾರ ಏರಿಕೆಯನ್ನು ಹೊಂದಿರುವ ದೇಶ ನಮ್ಮದಲ್ಲ; ದಕ್ಷಿಣಕ್ಕೆ ಕೆಲವು ದೇಶಗಳಿವೆ ಎಂದು ನಾನು ಭಾವಿಸುತ್ತೇನೆ” ಎಂದು ಜೈಶಂಕರ್ ಹೇಳಿದ್ದಾರೆ.

ರಷ್ಯಾದಿಂದ ತೈಲ ಖರೀದಿಸುವುದು ಸೇರಿದಂತೆ ವಿಶ್ವ ಇಂಧನ ಮಾರುಕಟ್ಟೆಯನ್ನು ಸ್ಥಿರಗೊಳಿಸಲು ಸಾಧ್ಯವಾದ ಎಲ್ಲವನ್ನೂ ಮಾಡಲು ಅಮೆರಿಕ ಭಾರತವನ್ನು ವರ್ಷಗಳಿಂದ ಒತ್ತಾಯಿಸುತ್ತಿತ್ತು ಎಂದು ಜೈಶಂಕರ್ ಗಮನಸೆಳೆದರು. ಪ್ರಾಸಂಗಿಕವಾಗಿ, ನಾವು ಯುಎಸ್‌ನಿಂದ ತೈಲವನ್ನು ಸಹ ಖರೀದಿಸುತ್ತೇವೆ ಮತ್ತು ಆ ಪ್ರಮಾಣ ಹೆಚ್ಚಾಗಿದೆ. ಆದ್ದರಿಂದ ಪ್ರಾಮಾಣಿಕವಾಗಿ, ವಾದದ ತರ್ಕದ ಬಗ್ಗೆ ನಮಗೆ ತುಂಬಾ ಗೊಂದಲವಿದೆ ಎಂದು ಜೈಶಂಕರ್ ಅಮೆರಿಕ ನಡೆಯನ್ನು ಟೀಕಿಸಿದ್ದಾರೆ.

ಅಮೆರಿಕ ಪರಿಣಾಮಕಾರಿಯಾಗಿ ಸುಂಕಗಳನ್ನು ದ್ವಿಗುಣಗೊಳಿಸಿದೆ. ರಷ್ಯಾದ ತೈಲ ಆಮದುಗಳನ್ನು ನಿಲ್ಲಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಭಾರತವನ್ನು ಒತ್ತಾಯಿಸಿದ್ದರು.

ಇದನ್ನೂ ಓದಿ