ಹೊಸದಿಗಂತ ಡಿಜಿಟಲ್ ಡೆಸ್ಕ್:
ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿದ್ದು, ಸರಣಿ ಜಯದ ಆಸೆಯನ್ನು ಜೀವಂತವಾಗಿಟ್ಟುಕೊಳ್ಳಲು ಸಜ್ಜಾಗಿದೆ. ಟಾಸ್ ಸೋತ ಭಾರತ ತಂಡ ಮೊದಲು ಬ್ಯಾಟಿಂಗ್‌ಗೆ ಇಳಿದಿದ್ದು, ಮೊದಲ ದಿನದ ಆಟದ ಅಂತ್ಯಕ್ಕೆ 83 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 264 ರನ್ ಗಳಿಸಿದೆ.
ಟೀಮ್ ಇಂಡಿಯಾದ ಆರಂಭಿಕ ಆಟಗಾರರಾದ ಯಶಸ್ವಿ ಜೈಸ್ವಾಲ್ ಹಾಗೂ ಕನ್ನಡಿಗ ಕೆಎಲ್ ರಾಹುಲ್ ಉತ್ತಮವಾಗಿ ಆರಂಭ ನೀಡಿದ್ದಾರೆ. ಮೊದಲ ವಿಕೆಟ್‌ಗೆ ಈ ಜೋಡಿ 94 ರನ್‌ಗಳ ಭರ್ಜರಿ ಜೊತೆಯಾಟ ನಡೆಸಿದ್ದಾರೆ. ರಾಹುಲ್ 98 ಎಸೆತಗಳಲ್ಲಿ 4 ಬೌಂಡರಿಗಳ ಸಹಿತ 46 ರನ್ ಗಳಿಸಿ ಅರ್ಧಶತಕದ ಗಡಿಗೆ ತಲುಪುವುದಕ್ಕೂ ಮೊದಲು ಕ್ರಿಸ್ ವೋಕ್ಸ್ ಬೌಲಿಂಗ್‌ನಲ್ಲಿ ಜ್ಯಾಕ್ ಕ್ರಾಲೆ ಮೂಲಕ ಕ್ಯಾಚ್ ಆಗಿ ಔಟ್ ಆದರು.
ಜೈಸ್ವಾಲ್ ಮತ್ತು ಸಾಯಿ ಸುದರ್ಶನ್ ನಡುವಿನ 2ನೇ ವಿಕೆಟ್ ಜೊತೆಯಾಟ 26 ರನ್‌ಗಳಿಗೆ ಸೀಮಿತವಾಯಿತು. ಜೈಸ್ವಾಲ್ 107 ಎಸೆತಗಳಲ್ಲಿ 10 ಬೌಂಡರಿ, 1 ಸಿಕ್ಸರ್ ಸೇರಿಸಿ 58 ರನ್ ಗಳಿಸಿ ಲಿಯಾಮ್ ಡಾಸನ್‌ಗೆ ವಿಕೆಟ್ ಒಪ್ಪಿಸಿದರು. ನಂತರ ನಾಯಕ ಶುಭ್‌ಮನ್ ಗಿಲ್ ಕೇವಲ 12 ರನ್ ಗಳಿಸಿ ನಿರಾಶೆ ಮೂಡಿಸಿದರು.
ಅಂತೆಯೇ, 4ನೇ ವಿಕೆಟ್‌ಗೆ ಸಾಯಿ ಸುದರ್ಶನ್ ಹಾಗೂ ರಿಷಭ್ ಪಂತ್ ನಡುವೆ 72 ರನ್‌ಗಳ ಸಹಭಾಗಿತ್ವ ಕಂಡುಬಂದಿತು. ಆದರೆ ಪಂತ್ 48 ಎಸೆತಗಳಲ್ಲಿ 37 ರನ್ ಗಳಿಸಿ ಉತ್ತಮ ಆಟವಾಡುತ್ತಿದ್ದ ಸಂದರ್ಭದಲ್ಲಿ ಕಾಲಿನ ಗಾಯಕ್ಕೆ ಒಳಗಾಗಿ ಪೆವಿಲಿಯನ್ ತಲುಪಿದರು. ನಂತರ ಸಾಯಿ ಸುದರ್ಶನ್ ಕೂಡಾ 151 ಎಸೆತಗಳಲ್ಲಿ 7 ಬೌಂಡರಿಗಳ ಸಹಿತ 61 ರನ್ ಗಳಿಸಿ ಬೆನ್ ಸ್ಟೋಕ್ಸ್ ಬೌಲಿಂಗ್‌ನಲ್ಲಿ ಬೆನ್ ಕಾರ್ಸ್‌ಗೆ ಕ್ಯಾಚ್ ಆಗಿ ಔಟ್ ಆದರು.
ಆಟದ ಅಂತ್ಯಕ್ಕೆ ರವೀಂದ್ರ ಜಡೇಜಾ (19) ಮತ್ತು ಶಾರ್ದೂಲ್ ಠಾಕೂರ್ (19) ಅಜೇಯವಾಗಿ ಕ್ರೀಸ್‌ನಲ್ಲಿ ಉಳಿದಿದ್ದಾರೆ. ಇಂಗ್ಲೆಂಡ್ ಪರ ಕ್ರಿಸ್ ವೋಕ್ಸ್, ಲಿಯಾಮ್ ಡಾಸನ್ ತಲಾ ಒಂದು ವಿಕೆಟ್ ಪಡೆದುಕೊಂಡರೆ, ನಾಯಕ ಸ್ಟೋಕ್ಸ್ 2 ವಿಕೆಟ್ ಕಬಳಿಸಿದ್ದಾರೆ. ಪಂತ್ ಗಾಯದ ಆಘಾತ ಭಾರತ ತಂಡದ ಮುಂದಿನ ಬ್ಯಾಟಿಂಗ್ ಶಕ್ತಿ ಮೇಲೆ ಪ್ರಭಾವ ಬೀರುತ್ತದೆಯೇ ಎಂಬ ಪ್ರಶ್ನೆ ಈಗ ಕ್ರೀಡಾಭಿಮಾನಿಗಳಲ್ಲಿ ಮೂಡಿದೆ.