Thursday, January 29, 2026
Thursday, January 29, 2026
spot_img

ಜಲಜೀವನ್ ಮಿಷನ್ ಅಕ್ರಮ ಆರೋಪ: ತಾಂತ್ರಿಕ ತಜ್ಞರ ಸಮಿತಿ ಮೂಲಕ ತನಿಖೆಗೆ ಕಾರಜೋಳ ಆಗ್ರಹ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜಲಜೀವನ್ ಮಿಷನ್ ಯೋಜನೆಯಡಿ ಕರ್ನಾಟಕದಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ತಾಂತ್ರಿಕ ತಜ್ಞರ ಸಮಿತಿಯನ್ನು ರಚಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಲೋಕಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಜಲಜೀವನ್ ಮಿಷನ್ ಸಂಬಂಧ ಈಗಾಗಲೇ 169 ದೂರುಗಳು ದಾಖಲಾಗಿವೆ ಎಂದು ಹೇಳಿದರು. ಈ ಕುರಿತು ಹಲವು ಬಾರಿ ಗಮನಕ್ಕೆ ತಂದರೂ ರಾಜ್ಯ ಸರ್ಕಾರ ಯಾವುದೇ ಸ್ಪಷ್ಟ ಕ್ರಮ ಕೈಗೊಂಡಿಲ್ಲ ಎಂಬ ಅಸಮಾಧಾನ ವ್ಯಕ್ತಪಡಿಸಿದರು.

ಅಧಿಕೃತ ದಾಖಲೆಗಳ ಪ್ರಕಾರ ಕ್ಷೇತ್ರದ 3,81,012 ಮನೆಗಳಲ್ಲಿ 3,36,040 ಮನೆಗಳಿಗೆ ಕೊಳವೆ ನೀರಿನ ಸಂಪರ್ಕ ಕಲ್ಪಿಸಲಾಗಿದೆ ಎನ್ನಲಾಗುತ್ತಿದೆ. ಆದರೆ ತಾವು ಸ್ವತಃ ಪರಿಶೀಲನೆ ನಡೆಸಿದಾಗ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಸುಮಾರು 88.6 ಶೇಕಡಾ ಸಂಪರ್ಕಗಳು ಅಸಮರ್ಪಕವಾಗಿವೆ ಎಂದು ಕಾರಜೋಳ ಆರೋಪಿಸಿದರು. ಈ ಹಿನ್ನೆಲೆ ತಾಂತ್ರಿಕ ತಜ್ಞರ ಸಮಿತಿಯಿಂದ ತನಿಖೆ ಅಗತ್ಯವಿದೆ ಎಂದು ಅವರು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಲಶಕ್ತಿ ಸಚಿವ ಸಿಆರ್ ಪಾಟೀಲ್, ರಾಜ್ಯ ಸರ್ಕಾರದಿಂದ ಮಾಹಿತಿ ಕೇಳಿದ್ದರೂ ಇನ್ನೂ ಉತ್ತರ ಬಂದಿಲ್ಲ ಎಂದರು. ಯೋಜನೆ ಕೇಂದ್ರದ್ದಾದರೂ ಡಿಪಿಆರ್ ಮತ್ತು ಟೆಂಡರ್ ಪ್ರಕ್ರಿಯೆ ರಾಜ್ಯದ ಹೊಣೆ ಎಂದು ಸ್ಪಷ್ಟಪಡಿಸಿದರು. ಅಕ್ರಮಗಳ ಬಗ್ಗೆ ತನಿಖೆ ನಡೆಸಲು ಪ್ರಧಾನಿ ಸೂಚನೆ ನೀಡಿದ್ದಾರೆ ಎಂದೂ, ಚಿತ್ರದುರ್ಗದಲ್ಲಿ ತಪ್ಪುಗಳು ಕಂಡುಬಂದರೆ ತನಿಖೆ ನಡೆಸುವುದಾಗಿ ಭರವಸೆ ನೀಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !