ಹೊಸದಿಗಂತ ವರದಿ ಮಡಿಕೇರಿ:
ಜಲಶಕ್ತಿ ಅಭಿಯಾನದಡಿಯಲ್ಲಿ ಕೈಗೊಂಡಿರುವ ಕಾಮಗಾರಿಗಳ ವಿವರವನ್ನು ಸಚಿತ್ರ ಸಹಿತ ಪೋರ್ಟಲ್’ನಲ್ಲಿ ಅಪ್ಲೋಡ್ ಮಾಡುವಂತೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಲಶಕ್ತಿ ಅಭಿಯಾನ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
2021ರಲ್ಲಿ ಕ್ಯಾಚ್ ದಿ ರೈನ್ ಕ್ಯಾಂಪೇನ್ ಮುಖಾಂತರ ಜಲಶಕ್ತಿ ಅಭಿಯಾನವನ್ನು ಆರಂಭಿಸಲಾಗಿದೆ. ಸಾಂಪ್ರದಾಯಿಕ ಜಲಮೂಲಗಳ ಸಂರಕ್ಷಣೆಯೊಂದಿಗೆ ಮಳೆ ನೀರನ್ನು ಸೂಕ್ತ ರೀತಿಯಲ್ಲಿ ಸಂಗ್ರಹಿಸಿ ವೈಜ್ಞಾನಿಕವಾಗಿ ಬಳಕೆ ಮಾಡುವ ಉದ್ದೇಶ ಜಲಶಕ್ತಿ ಅಭಿಯಾನದ್ದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಕೊಡಗು ಜಿಲ್ಲೆಯಲ್ಲಿಯೂ ಜಲಶಕ್ತಿ ಅಭಿಯಾನ ಯಶಸ್ವಿಯಾಗಿ ಸಾಗಿದ್ದು, ಜಲಶಕ್ತಿ ಪೋರ್ಟರ್’ನಲ್ಲಿ ಎಲ್ಲಾ ಇಲಾಖೆಗಳಲ್ಲಿ ಕೈಗೊಂಡ ಜಲಸಂರಕ್ಷಣಾ ಕಾಮಗಾರಿಗಳ ಫೋಟೋ ಮತ್ತು ವಿವರವನ್ನು ಕೇಂದ್ರೀಕರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿ.ಪಂ.ಸಿಇಒ ಡಾ.ಎಸ್.ಆಕಾಶ್ ಅವರು ಮಾತನಾಡಿ, ಜಲಶಕ್ತಿ ಅಭಿಯಾನದಡಿಯಲ್ಲಿ ಕೈಗೊಂಡಿರುವ ಮಾಹಿತಿ, ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಗಳ ಮಾಹಿತಿಯನ್ನು ಪೋರ್ಟಲ್’ನಲ್ಲಿ ಅಳವಡಿಸುವಂತೆ ತಿಳಿಸಿದರು.
ಜಲಶಕ್ತಿ ಅಭಿಯಾನದ ಸದಸ್ಯ ಕಾರ್ಯದರ್ಶಿ ಹಾಗೂ ಜಿ.ಪಂ. ಉಪಕಾರ್ಯದರ್ಶಿ ಜಿ.ಧನರಾಜು ಅವರು ಸಭೆಗೆ ಮಾಹಿತಿ ನೀಡಿ, ಈ ವರೆಗೂ ಕೊಡಗು ಜಿಲ್ಲೆಯಲ್ಲಿ 3,037 ಜಲಸಂರಕ್ಷಣಾ ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದರು.
ಜಿ.ಪಂ.ಯೋಜನಾ ನಿರ್ದೇಶಕ ಜಗದೀಶ್, ಜಂಟಿ ಕೃಷಿ ನಿರ್ದೇಶಕಿ ಶಬಾನ ಎಂ. ಶೇಖ್, ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಪ್ರಮೋದ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕಿ ವಿಸ್ಮಯ, ಮಡಿಕೇರಿ ತಾ.ಪಂ.ಇಒ ಶೇಖರ್, ಸೋಮವಾರಪೇಟೆ ತಾ.ಪಂ. ಇಒ ಜಯಣ್ಣ, ಪಿಆರ್’ಇಡಿ ಎಇ ಜವರೇಗೌಡ, ಉಪ ವಲಯ ಅರಣ್ಯಾಧಿಕಾರಿ ದರ್ಶಿನಿ, ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕರಾದ ಹೇಮಂತ್, ಶ್ರೀನಿವಾಸ್ ಇತರರು ಇದ್ದರು.