March 22, 2026
Sunday, March 22, 2026
spot_img

ನವ ತಂತ್ರಜ್ಞಾನದೊಂದಿಗೆ ಬೆಳಗಾವಿಯಲ್ಲಿ ‘ಜಂಬಗಿ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ’ ಲೋಕಾರ್ಪಣೆ

ಹೊಸದಿಗಂತ ಬೆಳಗಾವಿ:

ಕುಂದಾನಗರಿ ಬೆಳಗಾವಿಯ ವೈದ್ಯಕೀಯ ಕ್ಷೇತ್ರಕ್ಕೆ ಇಂದು ಮತ್ತೊಂದು ಹೊಸ ಆಯಾಮ ಸೇರ್ಪಡೆಯಾಗಿದೆ. ನಗರದ ಕೃಷ್ಣ ದೇವರಾಯ ವೃತ್ತದ ಬಳಿ ನಿರ್ಮಿಸಲಾಗಿರುವ ಅತ್ಯಾಧುನಿಕ ಸೌಲಭ್ಯಗಳ ‘ಜಂಬಗಿ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ’ಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಭಾನುವಾರ ಅದ್ಧೂರಿಯಾಗಿ ಉದ್ಘಾಟಿಸಿದರು.

ಉದ್ಘಾಟನೆ ನೆರವೇರಿಸಿ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, “ಬೆಳಗಾವಿ ಜಿಲ್ಲೆಯು ಇಂದು ರಾಜ್ಯದ ಎರಡನೇ ರಾಜಧಾನಿಯಾಗಿ ವೇಗವಾಗಿ ಬೆಳೆಯುತ್ತಿದೆ. ಈ ಬೆಳವಣಿಗೆಗೆ ಪೂರಕವಾಗಿ ಆರೋಗ್ಯ ಕ್ಷೇತ್ರವೂ ಬಲಿಷ್ಠಗೊಳ್ಳುತ್ತಿರುವುದು ಸಂತಸದ ವಿಷಯ. ಕೆಎಲ್‌ಇ ಸಂಸ್ಥೆಯು ಈ ಭಾಗದ ಆರೋಗ್ಯ ಕ್ಷೇತ್ರಕ್ಕೆ ಆಲದ ಮರದಂತೆ ನೆರಳು ನೀಡುತ್ತಿದೆ. ಈಗ ಜಂಬಗಿ ಆಸ್ಪತ್ರೆಯು ಜರ್ಮನಿ ಮತ್ತು ಜಪಾನ್‌ನ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಜನರಿಗೆ ಉತ್ತಮ ಸೇವೆ ನೀಡಲು ಮುಂದಾಗಿರುವುದು ಶ್ಲಾಘನೀಯ. ಈ ಆಸ್ಪತ್ರೆ ರಾಜ್ಯಾದ್ಯಂತ ವಿಸ್ತಾರಗೊಳ್ಳಲಿ” ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ್ ಕೋರೆ ಮಾತನಾಡಿ, “ಕಳೆದ 40 ವರ್ಷಗಳಲ್ಲಿ ಬೆಳಗಾವಿ ಅಭೂತಪೂರ್ವ ಬದಲಾವಣೆ ಕಂಡಿದೆ. ತಂತ್ರಜ್ಞಾನಕ್ಕೆ ತಕ್ಕಂತೆ ವೈದ್ಯಕೀಯ ಕ್ಷೇತ್ರವೂ ನವೀಕರಣಗೊಳ್ಳುತ್ತಿದೆ. ಜಂಬಗಿ ಆಸ್ಪತ್ರೆಯನ್ನು ನೋಡಿದರೆ ಇದು ಆಸ್ಪತ್ರೆಯೋ ಅಥವಾ ಫೈವ್ ಸ್ಟಾರ್ ಹೋಟೆಲೋ ಎನ್ನುವಷ್ಟು ಸುಂದರವಾಗಿ ನಿರ್ಮಾಣಗೊಂಡಿದೆ. ಈ ಸಂಸ್ಥೆ ಕೇವಲ ಜಿಲ್ಲೆಗೆ ಸೀಮಿತವಾಗದೆ ದೇಶಾದ್ಯಂತ ಹೆಸರು ಮಾಡಲಿ” ಎಂದು ಆಶಿಸಿದರು.

ಆಸ್ಪತ್ರೆಯ ಸಂಸ್ಥಾಪಕ ಡಾ. ಲಕ್ಷ್ಮಣ ಜಂಬಗಿ ಅವರು ಮಾತನಾಡಿ, “ಕಳೆದ 30 ವರ್ಷಗಳಿಂದ ವೈದ್ಯಕೀಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇವೆ. ರಾಯಭಾಗದ ಹಾರೂಗೇರಿಯ ಸಣ್ಣ ಕ್ಲಿನಿಕ್‌ನಿಂದ ಆರಂಭವಾದ ನಮ್ಮ ಪಯಣ, ಇಂದು ಬೆಳಗಾವಿಯ ಹೃದಯಭಾಗದಲ್ಲಿ ಸುಸಜ್ಜಿತ ಆಸ್ಪತ್ರೆಯಾಗಿ ನಿಂತಿದೆ. ಜನರಿಗೆ ಒಂದೇ ಸೂರಿನಡಿ ಕಣ್ಣಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು ನಮ್ಮ ಗುರಿ” ಎಂದರು.

ಆಸ್ಪತ್ರೆಯ ವಿಶೇಷತೆಗಳು:

ಜರ್ಮನಿ ಮತ್ತು ಜಪಾನ್‌ನಿಂದ ತರಿಸಲಾದ ಶಸ್ತ್ರಚಿಕಿತ್ಸಾ ಉಪಕರಣಗಳು.

ಮೊದಲ ಬಾರಿಗೆ ರೋಬೋಟಿಕ್ 4D ಫ್ಯಾಕೋ ಕ್ಯಾಟರಾಕ್ಟ್ ಶಸ್ತ್ರಚಿಕಿತ್ಸೆ ಲಭ್ಯ.

ಕನ್ನಡಕದಿಂದ ಮುಕ್ತಿ ಪಡೆಯಲು ಅತ್ಯಾಧುನಿಕ ‘ಜೈಸ್ಟ್ MEL 90 ಎಕ್ಸೆಮರ್ ಲೇಸರ್’ ತಂತ್ರಜ್ಞಾನ.

ಮೋತಿಬಿಂದು, ರೆಟಿನಾ, ಗ್ಲುಕೋಮಾ, ಮಕ್ಕಳ ನೇತ್ರಚಿಕಿತ್ಸೆ ಹಾಗೂ ಕಾರ್ನಿಯಾ ಸೇರಿದಂತೆ ಎಲ್ಲಾ ವಿಭಾಗಗಳ ತಜ್ಞ ವೈದ್ಯರ ಲಭ್ಯತೆ.

ಈ ಸಂದರ್ಭದಲ್ಲಿ ಡಾ. ವರ್ಷಾ ಜಂಬಗಿ, ಡಾ. ಅಮೋಘ ಜಂಬಗಿ, ಡಾ. ಪ್ರೇರಣಾ ಜಂಬಗಿ, ಡಾ. ಹಿತಾ ಹೆಬ್ಬಾಳ್ಕರ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !