ಹೊಸದಿಗಂತ ಡಿಜಟಲ್ ಡೆಸ್ಕ್
ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಶಾಸಕ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಹಾಡಿ ಹೊಗಳಿದ್ದಾರೆ.
ಸಾಮರಸ್ಯದ ಕುರಿತು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಆಡಿರುವ ಮಾತುಗಳು ನನಗೆ ತುಂಬಾ ಖುಷಿ ತಂದಿದೆ. ಹಿಂದು ಮುಸ್ಲಿಂ ಎಲ್ಲರೂ ಸಹೋದರರಂತೆ ಬಾಳಬೇಕು. ನಾವೆಲ್ಲರೂ ಒಟ್ಟಾಗಿ ಇರಬೇಕು ಅಂತಾ ಹೇಳಿರುವ ಬಿ.ಎಸ್ ಯಡಿಯೂರಪ್ಪ ಅವರ ಮಾತು ನಿಜಕ್ಕೂ ಸ್ವಾಗತಾರ್ಹ ಎಂದು ಜಮೀರ್ ಅಹ್ಮದ್ ಖಾನ್ ಹಾಡಿ ಹೊಗಳಿದ್ದಾರೆ.
ಈ ಕುರಿತಂತೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಪ್ರಸ್ತುತ ಸನ್ನಿವೇಶದಲ್ಲಿ ಅಂತಹ ಸೌಹಾರ್ದಯುತ ಮಾತುಗಳ ಅಗತ್ಯವಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಒಂದೂ ಈ ರೀತಿಯ ಕೀಳುಮಟ್ಟದ ರಾಜಕಾರಣ, ಅಶಾಂತಿ, ಗೊಂದಲ ಸೃಷ್ಟಿಸುವ ಘಟನೆಗಳು ನಡೆಯಲಿಲ್ಲ. ಅದಕ್ಕೇ ನಾನು ಮೊದಲಿನಿಂದಲೂ ‘ರೈಟ್ ಪರ್ಸನ್ ಇನ್ ರಾಂಗ್ ಪಾರ್ಟಿ’ ಎಂದು ಹೇಳುತ್ತಿದೆ ಎಂದರು.
ಅವರು ಏನೇ ಹೇಳಿದರೂ ಹೃದಯದಿಂದ ಹೇಳುತ್ತಾರೆ. ಮಾಜಿ ಸಿಎಂ ಕುಮಾರಸ್ವಾಮಿ ಅವರಂತೆ ಮನಸ್ಸಿನಲ್ಲೊಂದು ಇಟ್ಟುಕೊಂಡು, ಬಾಯಲ್ಲಿ ಒಂದು ಮಾತನಾಡುವವರಲ್ಲ. ಜನನಾಯಕರು ಯಾವಾಗಲೂ ಜಾತ್ಯಾತೀತವಾಗಿರಬೇಕಾಗುತ್ತದೆ. ಅದನ್ನು ನಾವು ಯಡಿಯೂರಪ್ಪ ಅವರಿಂದ ಕಲಿಯಬೇಕು. ಇಂದು ಸೌಹಾರ್ದಯುತ ಹೇಳಿಕೆ ನೀಡುವ ಮೂಲಕ ಮತ್ತೊಮ್ಮೆ ಅವರೊಬ್ಬ ಜಾತ್ಯಾತೀತ ನಾಯಕ ಎಂದು ಸಾಬೀತು ಪಡಿಸಿದ್ದಾರೆ. ಅದಕ್ಕಾಗಿ ನಾನು ಅವರಿಗೆ ವೈಯಕ್ತಿಕವಾಗಿ ಕರೆ ಮಾಡಿ ಅಭಿನಂದನೆಗಳನ್ನು ಸಲ್ಲಿಸಿದ್ದೇನೆ ಎಂದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿ. ಎಸ್ ಯಡಿಯೂರಪ್ಪನವರಂತಹ ಜಾತ್ಯಾತೀತ ನಾಯಕರು ನಮ್ಮ ರಾಜ್ಯಕ್ಕೆ ಬೇಕು. ದೇವರು ಅವರಿಗೆ ಹೆಚ್ಚಿನ ಆಯುಷ್ಯ, ಆರೋಗ್ಯ ಕೊಟ್ಟು ಕಾಪಾಡಲಿ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೂ ಇನ್ನಾದರೂ ಕೀಳುಮಟ್ಟದ ರಾಜಕಾರಣ ಬಿಡಿ. ಎಲ್ಲರೂ ಒಟ್ಟಾಗಿ ಹೋಗೋಣ ಎಂದು ತಿಳಿಸಿದರು.