ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಕಳೆದ 48 ಗಂಟೆಗಳಲ್ಲಿ ದಕ್ಷಿಣ ಕಾಶ್ಮೀರದ ಶೋಪಿಯಾನ್ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ ನಡೆದ ಎರಡು ಸಂಘಟಿತ ಕಾರ್ಯಾಚರಣೆಗಳಲ್ಲಿ 6 ಭಯೋತ್ಪಾದಕರನ್ನು ಹತ್ಯೆ ಮಾಡಿವೆ ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
ಅವಂತಿಪೋರಾದಲ್ಲಿರುವ ವಿಕ್ಟರ್ ಪ್ರಧಾನ ಕಚೇರಿಯಲ್ಲಿ ಜಿಒಸಿ ವಿಕ್ಟರ್ ಫೋರ್ಸ್ ಮೇಜರ್ ಜನರಲ್ ಧನಂಜಯ್ ಜೋಶಿ ಹಾಗೂ ಐಜಿ ಸಿಆರ್‌ಪಿಎಫ್ ಮತೀಶ್ ಜೈನ್ ಜೊತೆ ಜಂಟಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾಶ್ಮೀರ ಶ್ರೇಣಿಯ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ (ಐಜಿಪಿ) ವಿಧಿ ಕುಮಾರ್ ಬಿರ್ಡಿ, ಭಯೋತ್ಪಾದಕ ಚಟುವಟಿಕೆಗಳನ್ನು ಹತ್ತಿಕ್ಕುವ ಪ್ರಯತ್ನದಲ್ಲಿ ಇದು ಅತ್ಯಂತ ಮಹತ್ವದ ಸಾಧನೆ ಎಂದರು.
ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕ ಚಟುವಟಿಕೆಗಳ ವಿರುದ್ಧ ಕಳೆದ ಒಂದು ತಿಂಗಳ ಕಾಲ ನಡೆದ ಕಾರ್ಯತಂತ್ರದ ಫಲಿತಾಂಶದ ಫಲವಿದು. 48 ಗಂಟೆಗಳಲ್ಲಿ ಎರಡು ಯಶಸ್ವಿ ಕಾರ್ಯಾಚರಣೆಗಳನ್ನು ನಡೆಸಲಾಗಿದ್ದು, ಆರು ಭಯೋತ್ಪಾದಕರು ಹತರಾಗಿದ್ದಾರೆ.
ಪಹಲ್ಗಾಮ್ ದಾಳಿಯ ಬಳಿಕ ಭಾರತೀಯ ಸೇನೆಯು ಜಮ್ಮು-ಕಾಶ್ಮೀರದಾದ್ಯಂತ ಉಗ್ರರ ಸರ್ವನಾಶಕ್ಕೆ ಮುಂದಾಗಿದ್ದು, ಶೋಪಿಯಾನ್ ಮತ್ತು ಪುಲ್ವಾಮಾದ ಟ್ರಾಲ್‌ನಲ್ಲಿ ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಆರು ಭಯೋತ್ಪಾದಕರನ್ನು ಹೊಡೆದುರುಳಿಸಿದೆ. ಈ ಕಾರ್ಯಾಚರಣೆಗಳು ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನೂ ಸಹ ವಶಪಡಿಸಿಕೊಳ್ಳಲಾಗಿದೆ. ಸಿಆರ್‌ಪಿಎಫ್, ಭಾರತೀಯ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಪಡೆ ಜಂಟಿಯಾಗಿ ಈ ಕಾರ್ಯಾಚರಣೆಯನ್ನು ನಡೆಸಲಾಯಿತು ಎಂದು ಬಿರ್ಡಿ ತಿಳಿಸಿದ್ದಾರೆ.