ಜನಸಂಕಲ್ಪ ಯಾತ್ರೆ: ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಮ್ಮ ಸಂಕಲ್ಪ, ಅದಕ್ಕಾಗಿ ಸಾವಿರಾರು ಕೋಟಿ ಅನುದಾನ; ಬೊಮ್ಮಾಯಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕಾಂಗ್ರೆಸ್ ಪಕ್ಷದ 5 ವರ್ಷಗಳ ಆಡಳಿತದ ಅವಧಿಯಲ್ಲಿ ರಾಜ್ಯದ ಸ್ಥಿತಿಗೆ ಅಧೋಗತಿಗೆ ತಲುಪಿತ್ತು. ಆದರೆ, ಬಿಜೆಪಿ ಸರಕಾರವು ಕೋವಿಡ್ ಸಂಕಷ್ಟದ ನಡುವೆಯೇ ಗರಿಷ್ಠ ಅಭಿವೃದ್ಧಿಯನ್ನು ಸಾಧಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ಬುಧವಾರ ‘ಜನಸಂಕಲ್ಪ’ ಯಾತ್ರೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವಧಿಯಲ್ಲಿ ಈ ಭಾಗಕ್ಕೆ 1,500 ಕೋಟಿ ಅನುದಾನ ನೀಡಲಾಗಿದೆ. ಈ ವರ್ಷ ನಾವು 3 ಸಾವಿರ ಕೋಟಿಯ ಕ್ರಿಯಾಯೋಜನೆ ನೀಡಿದ್ದೇವೆ. 2 ಸಾವಿರ ಶಾಲಾ ಕೊಠಡಿಗಳನ್ನು ನಿರ್ಮಿಸುತ್ತಿದ್ದೇವೆ. 51 ಪಿಎಚ್‍ಸಿ ಕೇಂದ್ರ ನಿರ್ಮಿಸಲಾಗುವುದು. ಅಪ್ಪರ್ ಕೃಷ್ಣ ಯೋಜನೆಯಡಿ 5 ಸಾವಿರ ಕೋಟಿಗಿಂತ ಹೆಚ್ಚು ಅನುದಾನ ನೀಡುತ್ತೇವೆ ಎಂದು ಹೇಳಿದರು.
ಅಪ್ಪರ್ ಕೃಷ್ಣದಡಿ ಹೆಚ್ಚುವರಿ ನೀರು ಲಭಿಸುವ ವಿಶ್ವಾಸ ಇದೆ. ಈ ಭಾಗದ ಅಗತ್ಯಗಳನ್ನು ಈಡೇರಿಸುವ ಸಂಕಲ್ಪ ನಮ್ಮದು. 5 ಸಾವಿರ ಕೋಟಿ ಅದಕ್ಕಾಗಿ ವಿನಿಯೋಗ ಮಾಡಲಾಗುವುದು. ಮಲ್ಲಾಬಾದ್ ಏತ ನೀರಾವರಿ ಯೋಜನೆಯೂ ನಮ್ಮದೇ ಕೊಡುಗೆ. ಹೈಕ ದಲ್ಲಿ ಅತ್ಯಧಿಕ ಮತಗಳಿಂದ ಗೆದ್ದು ಅಧಿಕಾರ ಪಡೆದಿದ್ದ ಕಾಂಗ್ರೆಸ್ ನವರು ಕಲ್ಯಾಣ ಕರ್ನಾಟಕಕ್ಕಾಗಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಈ ಭಾಗದ ಜನರ ನಂಬಿಕೆ, ವಿಶ್ವಾಸ ಇಟ್ಟರೂ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಮಣ್ಣುಪಾಲಾಯ್ತು. ಕಾಂಗ್ರೆಸ್ ಆಡಳಿತದಲ್ಲಿ ನಂಜುಂಡಪ್ಪ ವರದಿ ದೂಳು ಹಿಡಿದಿತ್ತು. ಅದನ್ನು ಕಸದ ಬುಟ್ಟಿಗೆ ಹಾಕಿದ್ದರು. 371 ಜೆ ಬಂದರೂ ಅಭಿವೃದ್ಧಿಯು ಕೇವಲ ಕಾಗದದಲ್ಲೇ ಉಳಿದಿತ್ತು ಎಂದು ಟೀಕಿಸಿದರು.
ಈ ಭಾಗದ ಜನರ ಋಣದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ಆದರೆ, ಬಿಜೆಪಿ ನಿಮ್ಮ ಋಣ ತೀರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದೆ. ಬಿಜೆಪಿ ಈ ಭಾಗದ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಹೇಳಿದರು. ಬಿಜೆಪಿ, ಮೀಸಲಾತಿ ವಿಚಾರದಲ್ಲಿ ಇಚ್ಛಾಶಕ್ತಿ ಪ್ರದರ್ಶನ ಮಾಡಿದೆ. ಇದೊಂದು ಐತಿಹಾಸಿಕ ತೀರ್ಮಾನ ಎಂದು ವಿವರಿಸಿದರು. ದುಡಿಯುವ ವರ್ಗಕ್ಕೆ ಹೆಚ್ಚಿನ ಅವಕಾಶ ನೀಡಲು ಮತ್ತು ಸ್ವಾವಲಂಬಿ- ಸ್ವಾಭಿಮಾನದ ಜೀವನ ಸಾಗಿಸಲು ಈ ತೀರ್ಮಾನ ಎಂದರು.
ಕಾಂಗ್ರೆಸ್ ಶಾಸಕರು ಅಭಿವೃದ್ಧಿಯ ಹಣವನ್ನು ನುಂಗಿಹಾಕಿದರು. ಚಾದರ, ದಿಂಬಿನಲ್ಲೂ ಹಣ ನುಂಗಿ ಹಾಕಿದ್ದರು. ಬೆಂಗಳೂರು ನೆಲ, ನೀರಾವರಿ, ಬಂಧುಗಳಿಗೆ ನೌಕರಿ, ಪೊಲೀಸರಿಗೆ ನೌಕರಿ ವಿಷಯದಲ್ಲೂ ಭ್ರಷ್ಟಾಚಾರ ನಡೆಸಿದ್ದರು ಎಂದು ವಾಗ್ದಾಳಿ ನಡೆಸಿದರು.
ಸಿದ್ರಾಮಯ್ಯ ಮಾಡಿದ ಭ್ರಷ್ಟಾಚಾರದ ವಿವರವನ್ನು ರಾಹುಲ್ ಗಾಂಧಿಗೆ ಕಳುಹಿಸುವುದಾಗಿ ಹೇಳಿದ್ದೇನೆ. ಆ ಅವಧಿಯಲ್ಲಿ ನಡೆದ ಅವ್ಯವಹಾರಗಳ ತನಿಖೆ ನಡೆದಿದೆ. ರಾಹುಲ್ ಗಾಂಧಿ ಇವರ ಮೇಲೆ ಕ್ರಮ ತೆಗೆದುಕೊಳ್ಳುತ್ತಾರೋ ಎಂದು ಕೇಳುತ್ತೇವೆ. ದಾಖಲೆ ಕೊಟ್ಟು ಅವರ ಮೇಲೆ ಕ್ರಮಕ್ಕೆ ಕೋರಲಿದ್ದೇವೆ ಎಂದರು.
ಸಚಿವರು, ಶಾಸಕರು, ಜನಪ್ರತಿನಿಧಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!