ಹೊಸದಿಗಂತ ವರದಿ,ಬಳ್ಳಾರಿ:
ಜಿ.ಜನಾರ್ಧನ ರೆಡ್ಡಿ ಪಕ್ಷಕ್ಕೆ ಬಂದ್ರೆ ಒಳ್ಳೆಯದು ಎಂದು ಹೇಳಿದ್ದೇನೆ, ಈಗಲೂ ಅದನ್ನೇ ಹೇಳುವೆ, ಪಕ್ಷಕ್ಕೆ ಬರುವುದು ಬಿಡುವುದು ಅವರಿಗೆ ಬಿಟ್ಟಿದ್ದು, ಯಾವುದೇ ತೀರ್ಮಾನ ತೆಗೆದುಕೊಳ್ಳಲು ಸ್ವತಂತ್ರರು ಅವರು ಎಂದು ಮಾಜಿ ಶಾಸಕ ಜಿ.ಸೋಮಶೇಖರ್ ರೆಡ್ಡಿ ಅವರು ಹೇಳಿದರು.
ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜನಾರ್ಧನ ರೆಡ್ಡಿ ಬಂದ್ರೆ ಮತ್ತಷ್ಟು ಬಲ ಬರುತ್ತೆ ಅಂದಿರುವೆ, ಹಾಗೆಂದು ನಾವು ಅವರನ್ನು ಕೈ ಹಿಡಿದು ಕರ್ಕೊಂಡು ಬರ್ತೀವಿ ಎಂದು ಹೇಳಿಲ್ಲ, ವರಿಷ್ಠರ ಬಳಿ ಸೇರ್ಪಡೆ ಕುರಿತು ಚರ್ಚೆ ಆಗಿದೆಯೋ ಇಲ್ಲೋ ಗೊತ್ತಿಲ್ಲ, ರಾಜ್ಯಸಭೆ ಚುನಾವಣೆಯಲ್ಲಿ ಆತ್ಮಸಾಕ್ಷಿಗೆ ಓಟ್ ಮಾಡಿರುವೆ ಅಂದ್ರು, ಯಾರಿಗೆ ಮತ ಹಾಕಿದ್ದಾರೆ ಎಂಬುದು ಅವರಿಗೆ ಗೊತ್ತು ಎಂದರು.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ನ ಗ್ಯಾರಂಟಿಗಳಿಂದ ಹಿನ್ನೆಡೆಯಾಗಿದೆ, ಯಾರು ಯಾರನ್ನು ಸೋಲಿಸಲು ಸಾಧ್ಯವೇ ಇಲ್ಲ, ಸೋಲು, ಗೆಲುವು ಜನರ ಕೈಯಲ್ಲಿದೆ, ಸೋಲಿಸಲು ಒಬ್ಬ ವ್ಯಕ್ತಿ ಕೈಯಲ್ಲಿಲ್ಲ. ಪಕ್ಷ ತಾಯಿಗೆ ಸಮಾನ, ಪಾರ್ಟಿ ಮುಂದೆ ಯಾರೂ ದೊಡ್ಡವರಲ್ಲ, ನಾನಂತೂ ಸಾಯೋವರೆಗು ಪಕ್ಷದಲ್ಲೇ ಇರುವೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ವಕ್ತಾರ ಡಾ. ಬಿ.ಕೆ.ಸುಂದರ್, ಕೆ.ರಾಮಲಿಂಗಪ್ಪ, ಗಾಳಿ ಶಂಕ್ರಪ್ಪ, ಎಚ್.ಓಬಳೇಶ್, ಉಡೆಡ್ ಸುರೇಶ್, ಸೋಮಶೇಖರ್ ಗೌಡ, ವಿರೂಪಾಕ್ಷ ಗೌಡ ಇದ್ದರು.