ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಮೊದಲ ಮೂನ್ ಲ್ಯಾಂಡರ್ ಎಚ್ 2 ಎ ರಾಕೆಟ್ ಅನ್ನು ಇಂದು ಜಪಾನ್ ದೇಶದ ಬಾಹ್ಯಾಕಾಶ ಸಂಸ್ಥೆಯಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.
ಚಂದ್ರನ ಅಂಗಳಕ್ಕೆ ಕಾಲಿಡಲು ಸಜ್ಜಾಗಿರುವ ಜಪಾನ್ ದೇಶವು, ಇಂದು ಬೆಳಿಗ್ಗೆ 8:42ಕ್ಕೆ ರಾಕೆಟ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿತು. ಪ್ರತಿಕೂಲ ಹವಾಮಾನದಿಂದಾಗಿ ಮೂರು ಬಾರಿ ಮುಂದೂಡಲ್ಪಟ್ಟ ಈ ಮಿಷನ್ ಕೊನೆಗೂ ಇಂದು ಯಶಸ್ವಿಯಾಗಿ ರಾಕೆಟ್ ನಭಕ್ಕೆ ಚಿಮ್ಮಿದೆ. ಮುಂದಿನ ನಾಲ್ಕರಿಂದ ಆರು ತಿಂಗಳಲ್ಲಿ ಲ್ಯಾಂಡರ್ ಚಂದ್ರನ ಮೇಲ್ಮೈಗೆ ಇಳಿಯುವ ಸಾಧ್ಯತೆಯಿದೆ.
ಭಾರತವು ಕಳೆದ ತಿಂಗಳು ಚಂದ್ರನ ದಕ್ಷಿಣ ಧ್ರುವದ ಮೇಲೆ ನೌಕೆಯನ್ನು ಇಳಿಸುವಲ್ಲಿ ಯಶಸ್ವಿಯಾಯಿತು. ಇದರ ಬೆನ್ನಲ್ಲೇ ಇದೀಗ ಜಪಾನ್ ರಾಕೆಟ್ ಯಶಸ್ವಿಯಾಗಿ ಉಡಾವಣೆ ಮಾಡಿದ್ದು, ಏರೋಸ್ಪೇಸ್ ಎಕ್ಸ್ಪ್ಲೋರೇಶನ್ ಏಜೆನ್ಸಿ (ಜಾಕ್ಸಾ), ನಾಸಾ ಮತ್ತು ಯುರೋಪಿಯನ್ ಸ್ಪೇಸ್ ಏಜೆನ್ಸಿ ಅಭಿವೃದ್ಧಿಪಡಿಸಿದ ಸಂಶೋಧನಾ ಉಪಗ್ರಹವನ್ನು ರಾಕೆಟ್ ಹೊತ್ತೊಯ್ದಿದೆ. ದಕ್ಷಿಣ ಜಪಾನ್‌ನಲ್ಲಿ ನಡೆದ ಈ ಉಡಾವಣೆಯನ್ನು 35,000ಕ್ಕೂ ಹೆಚ್ಚು ಜನರು ಆನ್ ಲೈನ್ ನಲ್ಲಿ ವೀಕ್ಷಿಸಿ ಸುಂದರ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ.
ಚಂದ್ರನ ಅಧ್ಯಯನಕ್ಕಾಗಿ ಈ ಮುಂಚೆ ಜಪಾನ್ ದೇಶವು ನಡೆಸಿದ ಪ್ರಯತ್ನಗಳು ವಿಫಲವಾಗಿವೆ.