September 26, 2026
Saturday, September 26, 2026
spot_img

ಪುಣೆ-ಬೆಂಗಳೂರು ಹೈವೇಯಲ್ಲಿ ಜವರಾಯನ ಅಟ್ಟಹಾಸ: ಬೆಂಕಿಯ ಕೆನ್ನಾಲಿಗೆಗೆ ವಾಹನಗಳು ಭಸ್ಮ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಳಗಾವಿ ಜಿಲ್ಲೆಯ ಎಂ.ಕೆ ಹುಬ್ಬಳ್ಳಿ ಪಟ್ಟಣದ ಬಳಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಲಾರಿಗಳ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಎರಡೂ ವಾಹನಗಳು ಸಂಪೂರ್ಣವಾಗಿ ಹೊತ್ತಿ ಉರಿದಿರುವ ಘಟನೆ ನಡೆದಿದೆ. ಗೋವಿನ ಜೋಳದ ಮೂಟೆಗಳನ್ನು ಸಾಗಿಸುತ್ತಿದ್ದ ಲಾರಿಗೆ ಹಾಲಿನ ಟ್ಯಾಂಕರ್ ಹಿಂಬದಿಯಿಂದ ಜೋರಾಗಿ ಡಿಕ್ಕಿ ಹೊಡೆದಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ.

ಅದೃಷ್ಟವಶಾತ್ ಬದುಕುಳಿದ ಚಾಲಕರು

ಡಿಕ್ಕಿಯಾದ ತೀವ್ರತೆಗೆ ಲಾರಿಗಳಲ್ಲಿ ತಕ್ಷಣವೇ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ಕಾಣಿಸಿಕೊಂಡಿದೆ. ನೋಡನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಇಡೀ ವಾಹನಗಳನ್ನು ಆವರಿಸಿಕೊಂಡಿತು. ಆದರೆ, ಅದೃಷ್ಟವಶಾತ್ ಅಪಘಾತ ನಡೆದ ತಕ್ಷಣವೇ ಎರಡೂ ಲಾರಿಗಳ ಚಾಲಕರು ಸಮಯಪ್ರಜ್ಞೆ ಮೆರೆದು ಹೊರಗೆ ಜಿಗಿದಿದ್ದರಿಂದ ದೊಡ್ಡ ಮಟ್ಟದ ಪ್ರಾಣಾಪಾಯ ಸೃಷ್ಠಿಯಾಗದೆ ಇಬ್ಬರೂ ಸುರಕ್ಷಿತವಾಗಿ ಪಾರಾಗಿದ್ದಾರೆ.

ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್, ಅಗ್ನಿಶಾಮಕ ಕಾರ್ಯಾಚರಣೆ

ಘಟನೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡು, ಪ್ರಯಾಣಿಕರು ತೀವ್ರ ಪರದಾಡುವಂತಾಯಿತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಈ ಭೀಕರ ಅಪಘಾತ ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಹಾಗೂ ಸಂಚಾರ ದಟ್ಟಣೆಯನ್ನು ಸುಗಮಗೊಳಿಸಿದ್ದಾರೆ.

Must Read