ಜೆರೋಸಾ ಶಾಲಾ ಪ್ರಕರಣ | ಶಾಸಕರ ಮೇಲಿನ ಕೇಸು ಹಿಂಪಡೆಯದಿದ್ದರೆ ಪ್ರತಿಭಟನೆ: ನಳಿನ್‌ ಎಚ್ಚರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಮಂಗಳೂರು ನಗರದ ವೆಲೆನ್ಸಿಯಾದಸಂತ ಜೆರೋಸಾ ಶಾಲೆಯ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿಯ ಇಬ್ಬರು ಶಾಸಕರು ಹಾಗೂ ಇಬ್ಬರು ಕಾರ್ಪೋರೇಟರ್‌ಗಳ ಮೇಲೆ ಕಾಂಗ್ರೆಸ್ ಕೇಸು ದಾಖಲಿಸಿರುವುದು ಕಾಂಗ್ರೆಸ್‌ನ ಹೇಯ ರಾಜಕಾರಣಕ್ಕೆ ಸಾಕ್ಷಿ. ಕೇಸು ಹಿಂಪಡೆಯದೇ ಇದ್ದಲ್ಲಿ ಜಿಲ್ಲೆಯಾದ್ಯಂತ ಉಗ್ರ ಪ್ರತಿಭಟನೆ ಕೈಗೆತ್ತಿಕೊಳ್ಳಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಎಚ್ಚರಿಸಿದ್ದಾರೆ.
ನಗರದ ಬಂಟ್ಸ್ ಹಾಸ್ಟೆಲ್ ಬಳಿ ಗುರುವಾರ ದ.ಕ.ಲೋಕಸಭಾ ಚುನಾವಣಾ ಕಚೇರಿ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಪ್ರತಿನಿಗಳ ವಿರುದ್ಧ ಕೇಸು ದಾಖಲಿಸುವ ಮೂಲಕ ಕಾಂಗ್ರೆಸ್ ಮತಬ್ಯಾಂಕ್‌ಗಾಗಿ ತುಷ್ಠೀಕರಣ ನೀತಿ ಅನುಸರಿಸುತ್ತಿದೆ. ರಾಮನ ವಿರುದ್ಧ ಮಾತನಾಡಿದವರ ಮೇಲೆ ಕ್ರಮ ಕೈಗೊಳ್ಳದೆ, ಅವಹೇಳನ ಮಾಡಿದವರ ಪರ ಕಾಂಗ್ರೆಸ್ ನಾಯಕರು ನಿಂತಿರುವುದು ಖೇದಕರ ಎಂದರು.
ಶಾಲೆಯಲ್ಲಿ ನಡೆದಿರುವುದು ಬಿಜೆಪಿ ವರ್ಸಸ್ ಕಾಂಗ್ರೆಸ್ ಹೋರಾಟ ಅಲ್ಲ, ಹಿಂದು ದೇವರ ನಿಂದನೆಗೆ ಶಿಕ್ಷಕಿ ವಿರುದ್ಧ ಪೋಷಕರು, ಹೆತ್ತವರು ನಡೆಸಿದ ಹೋರಾಟಕ್ಕೆ ಶಾಸಕರು ಬೆಂಗಾವಲಾಗಿ ಹೋಗಿದ್ದಾರೆ ಅಷ್ಟೆ. ರಾಮ ವಿರೋಧಿ ಶಿಕ್ಷಕಿಯ ಮೇಲೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಸಾರ್ವಜನಿಕರಿಗೆ ಸ್ಪಷ್ಟಪಡಿಸಬೇಕು ಎಂದು ನಳಿನ್ ಕುಮಾರ್ ಆಗ್ರಹಿಸಿದರು.
ಈ ಹಿಂದೆ ಬಾವುಟಗುಡ್ಡೆಯಲ್ಲಿ ಮೂಲ್ಕಿ ಸುಂದರರಾಮ್ ಶೆಟ್ಟಿ ರಸ್ತೆಗೆ ಹೆಸರಿಡುವ ವಿಚಾರದಲ್ಲಿ ಕಾಂಗ್ರೆಸ್‌ನವರು ಅಲೋಶಿಯಸ್ ಶಾಲಾ ವಿದ್ಯಾರ್ಥಿಗಳನ್ನು ಕೂರಿಸಿ ಪ್ರತಿಭಟನೆ ನಡೆಸಿದ್ದರು. ಆಗ ಶಾಸಕರು ಪ್ರತಿಭಟನೆಯ ನೇತೃತ್ವ ವಹಿಸಿದ್ದರೂ ಯಾವ ಕೇಸು ದಾಖಲಾಗಿರಲಿಲ್ಲ. ಇದನ್ನು ನಾವು ಖಂಡಿಸುತ್ತೇವೆ ಎಂದರು.
ಶಾಲೆಯಲ್ಲಿ ಬಿಜೆಪಿ ರಾಜಕೀಯಕ್ಕೆ ಮಕ್ಕಳನ್ನು ಬಳಸಿಲ್ಲ. ಅದು ಬಿಜೆಪಿ ಅಥವಾ ಹಿಂದು ಸಂಘಟನೆಗಳು ಕೈಗೆತ್ತಿಕೊಂಡ ಹೋರಾಟ ಅಲ್ಲ. ಪೋಷಕರು ಹಾಗೂ ಹೆತ್ತವರು ಹೋರಾಟ ನಡೆಸಿದ್ದು, ನಾನೂ ಇದ್ದರೆ ಅದರಲ್ಲಿ ಭಾಗವಹಿಸುತ್ತಿದ್ದೆ. ಶಾಸಕರು ಅಲ್ಲಿಂದಲೇ ಅಧಿಕಾರಿಗಳು, ಸರ್ಕಾರದ ಜತೆ ಮಾತನಾಡಿದ್ದಾರೆ. ರಾಮನ ಅವಹೇಳನ ಮಾಡುವುದನ್ನು ಎಷ್ಟು ಮಾತ್ರಕ್ಕೂ ಸಹಿಸಲು ಸಾಧ್ಯವಿಲ್ಲ. ಇದರ ವಿರುದ್ಧ ಕಾನೂನಾತ್ಮಕ ಹಾಗೂ ಬೀದಿಗಿಳಿದು ಹೋರಾಟ ನಡೆಸುವುದಾಗಿ ನಳಿನ್ ಕುಮಾರ್ ಹೇಳಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!