ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀರಾಮನಿಗೆ ಅವಮಾನ ಮಾಡಿದ ಪ್ರಕರಣ ಸಂಬಂಧ ದಕ್ಷಿಣ ಕಾನಂದ ಜಿಲ್ಲೆಯ ಮಂಗಳೂರಿನ ಸಂತ ಜೆರೋಸಾ ಶಾಲೆಯ (St Gerosa School) ಶಿಕ್ಷಕಿ ಅಮಾನತು ಮಾಡುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆ ಸಂಬಂಧ ಬಿಜೆಪಿ ಶಾಸಕರಾದ ವೇದವ್ಯಾಸ್ ಕಾಮತ್ (Vedavyas Kamath) ಹಾಗೂ ಭರತ್ ಶೆಟ್ಟಿ (Bharath Shetty) ವಿರುದ್ಧ ಪ್ರಕರಣ ದಾಖಲಾಗಿದೆ.
ಈ ವಿಚಾರ ಇಂದು ವಿಧಾನಸಭೆ ಅಧಿವೇಶನದಲ್ಲಿ (Assembly Session) ಚರ್ಚೆಯಾಗಿ ಆಡಳಿತ ಪಕ್ಷ ಹಾಗೂ ವಿಪಕ್ಷ ಸದಸ್ಯ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.
ಶಾಸಕ ಭರತ್ ಶೆಟ್ಟಿ ವಿರುದ್ಧ ಎಫ್ಐಆರ್ ದಾಖಲಿಸಿದ ಎಸ್ಐ ಸಸ್ಪೆಂಡ್ ಮಾಡುವಂತೆ ಸದನದಲ್ಲಿ ಬಿಜೆಪಿ ಸದಸ್ಯರು ಒತ್ತಾಯಿಸಿದ್ದು, ವಿಪಕ್ಷ ನಾಯಕ ಆರ್. ಅಶೋಕ್, ಮಾಜಿ ಮುಖ್ಯಮಂತ್ರಿಗಳಾ ಬಸವರಾಜ ಬೊಮ್ಮಾಯಿ, ಹೆಚ್.ಡಿ. ಕುಮಾರಸ್ವಾಮಿ ಅವರು ಎಸ್ಐ ಸಮಾನತು ಮಾಡುವಂತೆ ಪಟ್ಟು ಹಿಡಿದರು. ಅಲ್ಲದೆ, ಸದನದಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ವಾಕ್ಸಮರ ನಡೆಯಿತು.
ಮಂಗಳೂರಿನ ಜೆರೋಸಾ ಶಿಕ್ಷಣ ಸಂಸ್ಥೆಯ ವಿವಾದ ಪ್ರಕರಣ ಸಂಬಂಧ ಭರತ್ ಶೆಟ್ಟಿ ಟ್ವೀಟ್ ಮಾಡಿದ್ದರು. ಪೋಸ್ಟ್ ಮಾಡಿದ ಸಾಲುಗಳನ್ನು ಸದನದಲ್ಲಿ ಪರಮೇಶ್ವರ್ ಓದಿದರು. ಈ ವೇಳೆ, ಇದರಲ್ಲಿ ಏನು ತಪ್ಪಿದೆ ಎಂದು ಭರತ್ ಶೆಟ್ಟಿ ಕೇಳಿದರು. ಇದಕ್ಕೆ ನಿಧಾನಕ್ಕೆ ಮಾತನಾಡಿ ಎಂದ ಪರಮೇಶ್ವರ್ ಹೇಳಿದಾಗ ಬಿಜೆಪಿ ಸದಸ್ಯರು ಸಿಟ್ಟಾದರು. ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಸುನೀಲ್ ಕುಮಾರ್ ನಡುವೆ ವಾಕ್ಸಮರ, ಗದ್ದಲ ನಡೆಯಿತು.
ಪೊಲೀಸರ ನಡೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು, ಶಾಸಕ ಭರತ್ ಶೆಟ್ಟಿ ವಿರುದ್ಧ ಎಫ್ಐಆರ್ ದಾಖಲಿಸಿದ ಬಗ್ಗೆ ಬಿಜೆಪಿ ಸದಸ್ಯರು ಸದನದಲ್ಲಿ ಕಿಡಿಕಾರಿದರು. ಶಾಸಕರ ರಕ್ಷಣೆಗೆ ಸರ್ಕಾರ ಬರಬೇಕಿತ್ತು. ಸದನ ನಡೆಯುತ್ತಿರುವಾಗ ಎಫ್ಐಆರ್ ಹೇಗೆ ಹಾಕಿದರು ಎಂದು ಸುನೀಲ್ ಕುಮಾರ್, ಅಶೋಕ್ ಆಕ್ರೋಶ ಭರಿತರಾಗಿ ಪ್ರಶ್ನಿಸಿದರು.
ಈ ನಡುವೆ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಶಾಲೆ ಬಗ್ಗೆ ಒಳ್ಳೆಯ ಇತಿಹಾಸ ಇದೆ. ಅಲ್ಲಿ ನಡೆದ ಘಟನೆ ಬಗ್ಗೆ ತನಿಖೆಯಿಂದ ಸತ್ಯ ಗೊತ್ತಾಗುತ್ತದೆ ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಬಸವರಾಜ ಬೊಮ್ಮಾಯಿ, ಶಾಲೆಯವರು ಸರಿ ಇದ್ದಾರೆ, ಆ ಟೀಚರ್ ತಪ್ಪಿದೆ ಅಂತ ಗೊತ್ತಾಗಿಯೇ ಅವರು ಸಸ್ಪೆಂಡ್ ಮಾಡಿದ್ದಾರೆ. ಸಸ್ಪೆಂಡ್ ಆದ ನಂತರದ ವಿದ್ಯಮಾನಗಳ ಒತ್ತಡದಿಂದ ಶಾಸಕರ ಮೇಲೆ ಎಫ್ಐಆರ್ ಹಾಕಲಾಗಿದೆ. ಅನಗತ್ಯವಾಗಿ ಕೆಲವರು ಘಟನೆಯಲ್ಲಿ ಮಧ್ಯ ಪ್ರವೇಶ ಮಾಡಿದ್ದಾರೆ ಎಂದು ಆರೋಪಿಸಿದರು.
ಭರತ್ ಶೆಟ್ಟಿ ವಿರುದ್ಧ ದಾಖಲಾದ ಎಫ್ಐಆರ್ ಕುರಿತು ಮಾತನಾಡಿದ ಪರಮೇಶ್ವರ್, ಜೆರೋಸಾ ಶಾಲೆಯ ಆವರಣದಲ್ಲಿ ಶಾಸಕ ಭರತ್ ಶೆಟ್ಟಿ ಇರಲಿಲ್ಲ. ನಾನು ಪೊಲೀಸ್ ಆಯುಕ್ತರ ಜೊತೆ ಚರ್ಚಿಸಿ ಮಾಹಿತಿ ಪಡೆದಿದ್ದೇನೆ. ಆದರೆ ಡಿಡಿಪಿಐ ಕಚೇರಿಗೆ ಬಿಜೆಪಿ ಶಾಸಕ ಭರತ್ ಶೆಟ್ಟಿ ಹೋಗಿದ್ದಾರೆ. ಕ್ರಿಶ್ಚಿಯನ್ ಶಾಲೆಗೆ ಮಕ್ಕಳನ್ನು ಕಳಿಸಬೇಡಿ ಎಂದು ಹೇಳಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
ಜೆರೋಸಾ ಶಿಕ್ಷಣ ಸಂಸ್ಥೆಯ ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ. ಅಧಿಕಾರಿ ತಪ್ಪು ಮಾಡಿದ್ದರೆ ಕೂಡಲೇ ಕ್ರಮ ತೆಗೆದುಕೊಳ್ಳುತ್ತೇನೆ. ದೂರಿನಲ್ಲಿ ಶಾಸಕರ ಹೆಸರು ಇದೆ ಅಂತಾ ಎಫ್ಐಆರ್ನಲ್ಲಿ ಹಾಕಿದ್ದಾರೆ ಎಂದು ಪರಮೇಶ್ವರ್ ಹೇಳಿದರು.
ಸದನದ ಬಾವಿಗಿಳಿಯಲು ಮುಂದಾದ ಬಿಜೆಪಿ
ಜೆರೋಸಾ ಶಿಕ್ಷಣ ಸಂಸ್ಥೆಯ ಪ್ರಕರಣದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿತು. ಸರ್ಕಾರದ ನಿಲುವಿನ ವಿರುದ್ಧ ಬಿಜೆಪಿ ಸದಸ್ಯರು ಸದನದ ಬಾವಿಗಿಳಿಯಲು ಮುಂದಾದರು. ಈ ವೇಳೆ ಗದ್ದಲ ಹೆಚ್ಚಾದ ಹಿನ್ನೆಲೆಯಲ್ಲಿ ಸ್ಪೀಕರ್ ಯುಟಿ ಖಾದರ್ ಅವರು ಕಲಾಪವನ್ನು ನಾಳೆ ಬೆಳಗ್ಗೆ 10.15ಕ್ಕೆ ಮುಂದೂಡಿದರು.