ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾರ್ಖಂಡ್ ಸರ್ಕಾರದ ಹಿರಿಯ ಸಚಿವರ ಹಾಗೂ ಜಾರ್ಖಂಡ್ JMM ಪಕ್ಷದ ಪ್ರಭಾವಿ ನಾಯಕರಾದ ಸುದಿವ್ಯ ಕುಮಾರ್ (56) ಇಂದು (ಭಾನುವಾರ) ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಗಿರೀಡೀಹ್ ಕ್ಷೇತ್ರದ ಶಾಸಕರಾಗಿದ್ದ ಅವರು ಸರ್ಕಾರದ ಉನ್ನತ ಶಿಕ್ಷಣ, ನಗರಾಭಿವೃದ್ಧಿ, ಪ್ರವಾಸೋದ್ಯಮ ಮತ್ತು ಕ್ರೀಡಾ ಇಲಾಖೆ ಸೇರಿದಂತೆ ಹಲವು ಪ್ರಮುಖ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದರು. ಅವರ ಅಕಾಲಿಕ ಮರಣವು ಜಾರ್ಖಂಡ್ ರಾಜಕಾರಣದಲ್ಲಿ ತುಂಬಲಾರದ ನಷ್ಟ ಉಂಟುಮಾಡಿದೆ.
ಸಿಎಂ ಹೇಮಂತ್ ಸೊರೇನ್ ಕಂಬನಿ
ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಅತ್ಯಂತ ಆಪ್ತರಾಗಿದ್ದ ಸುದಿವ್ಯ ಕುಮಾರ್, 2024ರಲ್ಲಿ ಸಿಎಂ ಬಂಧನಕ್ಕೊಳಗಾಗಿದ್ದಾಗ ಪಕ್ಷದ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಹೇಮಂತ್ ಸೊರೇನ್, ʼಸೋನು ಭೈಯ್ಯಾ ನನಗೆ ಕೇವಲ ರಾಜಕೀಯ ಸಹೋದ್ಯೋಗಿಯಷ್ಟೇ ಆಗಿರಲಿಲ್ಲ, ಅವರು ನನ್ನ ಸ್ವಂತ ಅಣ್ಣನಂತಿದ್ದರು. ಪ್ರತಿಯೊಂದು ಕಷ್ಟದ ಸಮಯದಲ್ಲೂ ನನ್ನ ಬೆನ್ನಿಗೆ ನಿಂತು ಮಾರ್ಗದರ್ಶನ ನೀಡುತ್ತಿದ್ದರು. ಅವರ ಅಗಲಿಕೆ ವೈಯಕ್ತಿಕವಾಗಿ ನನಗೆ ತುಂಬಲಾರದ ನಷ್ಟʼ ಎಂದು ಎಕ್ಸ್ ನಲ್ಲಿ ಭಾವುಕರಾಗಿ ಬರೆದುಕೊಂಡಿದ್ದಾರೆ. ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷವೂ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಕರ್ನಾಟಕ ಪ್ರವಾಸ ಮುಗಿಸಿ ಮರಳಿದ್ದ ಸಚಿವ
ವಿಶೇಷವೆಂದರೆ, ಸಚಿವ ಸುದಿವ್ಯ ಕುಮಾರ್ ಅವರು ಜಾರ್ಖಂಡ್‌ನಲ್ಲಿ ಪ್ರವಾಸೋದ್ಯಮ ಮತ್ತು ಅರಣ್ಯ ನಿರ್ವಹಣೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಅಧ್ಯಯನ ನಡೆಸಲು ಕಳೆದ ವಾರವಷ್ಟೇ ಸರ್ಕಾರಿ ನಿಯೋಗದೊಂದಿಗೆ ಕರ್ನಾಟಕಕ್ಕೆ ಭೇಟಿ ನೀಡಿದ್ದರು. ಬೆಂಗಳೂರಿನಲ್ಲಿ ಕರ್ನಾಟಕದ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರನ್ನು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದ್ದರು. ಕರ್ನಾಟಕದ ಪ್ರಸಿದ್ಧ ‘ಜಂಗಲ್ ಲಾಡ್ಜಸ್ ಆಂಡ್ ರೆಸಾರ್ಟ್ಸ್’ ಮಾದರಿಯನ್ನು ಜಾರ್ಖಂಡ್‌ನಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ಒಪ್ಪಂದದ ಮಾತುಕತೆ ಮುಗಿಸಿ ಮರಳಿದ ಕೆಲವೇ ದಿನಗಳಲ್ಲಿ ಈ ದುರಂತ ಸಂಭವಿಸಿದೆ.



