ಹೊಸದಿಗಂತ ಡಿಜಿಟಲ್ ಡೆಸ್ಕ್:
ಎರಡ್ಮೂರು ತಿಂಗಳ ಹಿಂದಷ್ಟೇ ನಾಯಕತ್ವ ಅಗ್ನಿ ಪರೀಕ್ಷೆಯಲ್ಲಿ ಮತ್ತೊಮ್ಮೆ ಗೆಲ್ಲುವ ಮೂಲಕ ಚೀನಾದ ಅಧ್ಯಕ್ಷ ಸ್ಥಾನದ ವಾರಸುದಾರಿಕೆಯನ್ನು ಗಟ್ಟಿಗೊಳಿಸಿಕೊಂಡಿರುವ್ ಕ್ಸೀ ಜಿನ್ ಪಿಂಗ್ ಇದೀಗ ಸೌದಿ ಅರೇಬಿಯಾದತ್ತ ಪ್ರಯಾಣ ಬೆಳೆಸುತ್ತಿದ್ದಾರೆ. ಜಗತ್ತಿನ ಅತಿ ದೊಡ್ಡ ತೈಲ ರಫ್ತುದಾರ ದೇಶವಾಗಿರುವ ಸೌದಿಯ ರಾಜನೊಂದಿಗೆ ಜಿನ್ ಪಿಂಗ್ ರ ಈ ಭೇಟಿಯು ಚೀನಾ ಹಾಗೂ ಸೌದಿ ರಾಷ್ಟ್ರಗಳ ನಡುವಿನ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸಲಿದ್ದು ಹೊಸ ಎತ್ತರಕ್ಕೆ ಕೊಂಡೊಯ್ಯುಲಿದೆ ಎಂದು ಕೆಲ ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಕೋವಿಡ್ ಸಾಂಕ್ರಾಮಿಕದ ನಂತರ ಚೀನಾ ಅಧ್ಯಕ್ಷರ ಮೂರನೇ ಅಂತಾರಷ್ಟ್ರೀಯ ಪ್ರವಾಸ ಇದಾಗಿದ್ದು ಮೂರು ದಿನಗಳ ಈ ಪ್ರವಾಸದಲ್ಲಿ ಜಿನ್ ಪಿಂಗ್ ಸೌದಿಯ ರಾಜನೊಂದಿಗೆ ಹಲವು ಒಪ್ಪಂದಗಳನ್ನು ಮಾಡಿಕೊಳ್ಳಲಿದ್ದಾರೆ. ಅಲ್ಲದೇ ಚೀನಾ ಜಿಸಿಸಿ ಶೃಂಗದಲ್ಲಿಯೂ ಅವರು ಭಾಗವಹಿಸಲಿದ್ದಾರೆ. ಮಾತುಕತೆಗಳ ನಂತರ ಸೌದಿಯೊಂದಿಗೆ ಚೀನಾ 29 ಬಿಲಿಯನ್ ಡಾಲರುಗಳ ಒಪ್ಪಂದಕ್ಕೆ ಸಹಿಹಾಕಲಿದೆ. ಇದಲ್ಲದೇ ಇನ್ನೂ ಹತ್ತು ಹಲವು ಹೂಡಿಕೆಗಳತ್ತ ಚೀನಾ ಒಲವು ತೋರಿದೆ ಎನ್ನಲಾಗಿದೆ. ಶೂನ್ಯ ಕೋವಿಡ್ ನೀತಿಯಿಂದ ಚೀನಾದ ಆಂತರಿಕ ಪರಿಸ್ಥಿತಿ ಹದಗೆಟ್ಟಿದ್ದು ಐಫೋನ್ ಮುಂತಾದ ಟೆಕ್ ದಿಗ್ಗಜ ಕಂಪನಿಗಳು ಚೀನಾವನ್ನು ತೊರೆಯುತ್ತಿವೆ. ಇವೆಲ್ಲದರ ನಡುವೆಯೇ ಚೀನಾದ ಈ ಹೂಡಿಕೆ ಒಪ್ಪಂದವು ಹಲವು ಕುತೂಹಲಗಳನ್ನು ಹುಟ್ಟುಹಾಕಿದೆ.
ಅಮೆರಿಕ, ಯುರೋಪ್ ಮುಂತಾದ ಪಾಶ್ಚಿಮಾತ್ಯ ರಾಷ್ಟ್ರಗಳೊಂದಿಗೆ ಚೀನಾದ ಸಂಬಂಧ ಹಳಸುತ್ತಿರುವುದರಿಂದ ಮಧ್ಯಪ್ರಾಚ್ಯ ರಾಷ್ಟ್ರಗಳತ್ತ ಚೀನಾ ಮುಖ ಮಾಡಿದೆ ಎನ್ನಲಾಗುತ್ತಿದ್ದು ಸೌದಿ ಸೇರಿದಂತೆ ಇತರ ಗಲ್ಫ್ ರಾಷ್ಟ್ರಗಳಿಗೆ ಮಣೆಹಾಕಲು ಚೀನಾ ಯೋಚಿಸುತ್ತಿದೆಯಾ ಎಂಬ ಅನುಮಾನಗಳು ಈಗ ಹುಟ್ಟಿಕೊಂಡಿವೆ.