Friday, January 2, 2026

ಜಿಯೋ-ಏರ್‌ಟೆಲ್‌ಗೆ ಟಕ್ಕರ್: BSNLನಿಂದ ಗ್ರಾಹಕರಿಗೆ ಬಿಗ್ ನ್ಯೂ ಇಯರ್ ಗಿಫ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮನೆಯ ಒಂದು ಕೋಣೆಯಲ್ಲಿ ನೆಟ್‌ವರ್ಕ್ ಬಂದರೆ, ಇನ್ನೊಂದು ಕೋಣೆಯಲ್ಲಿ ಸಿಗ್ನಲ್ ಮಾಯವಾಗುವ ಸಮಸ್ಯೆಗೆ ಈಗ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಶಾಶ್ವತ ಪರಿಹಾರ ನೀಡಿದೆ. 2026ರ ಹೊಸ ವರ್ಷದ ಉಡುಗೊರೆಯಾಗಿ ತನ್ನ ಲಕ್ಷಾಂತರ ಗ್ರಾಹಕರಿಗೆ ‘ವೈ-ಫೈ ಕಾಲಿಂಗ್’ ಅಥವಾ ‘ವಾಯ್ಸ್ ಓವರ್ ವೈ-ಫೈ’ ಸೇವೆಯನ್ನು ಉಚಿತವಾಗಿ ಆರಂಭಿಸಿದೆ.

ಸಾಮಾನ್ಯವಾಗಿ ಮೊಬೈಲ್ ಕರೆ ಮಾಡಲು ಸಿಮ್ ಕಾರ್ಡ್‌ಗೆ ಸೆಲ್ಯುಲಾರ್ ನೆಟ್‌ವರ್ಕ್ ಅಗತ್ಯವಿರುತ್ತದೆ. ಆದರೆ ಬಿಎಸ್ಎನ್ಎಲ್‌ನ ಈ ಹೊಸ ತಂತ್ರಜ್ಞಾನದ ಮೂಲಕ, ನಿಮ್ಮ ಫೋನ್‌ನಲ್ಲಿ ಸಿಗ್ನಲ್ ಇಲ್ಲದಿದ್ದರೂ ಕೇವಲ ವೈ-ಫೈ ಸಂಪರ್ಕವಿದ್ದರೆ ಸಾಕು, ಅತ್ಯಂತ ಸ್ಪಷ್ಟವಾದ ಧ್ವನಿಯಲ್ಲಿ ಮಾತನಾಡಬಹುದು.

ಹೆಚ್ಚುವರಿ ಶುಲ್ಕವಿಲ್ಲ: ಈ ಸೇವೆಗಾಗಿ ಗ್ರಾಹಕರು ಯಾವುದೇ ಹಣ ಪಾವತಿಸಬೇಕಿಲ್ಲ.

ಆ್ಯಪ್ ಅಗತ್ಯವಿಲ್ಲ: ವಾಟ್ಸಾಪ್ ಕರೆಗಳಂತೆ ಇದಕ್ಕೆ ಯಾವುದೇ ಮೂರನೇ ವ್ಯಕ್ತಿಯ ಆ್ಯಪ್‌ಗಳ ಅವಶ್ಯಕತೆ ಇರುವುದಿಲ್ಲ.

ಸ್ಮೂತ್ ಸ್ವಿಚಿಂಗ್: ನೀವು ವೈ-ಫೈ ಮೂಲಕ ಮಾತನಾಡುತ್ತಾ ಹೊರಗೆ ಹೋದಾಗ, ವೈ-ಫೈ ಸಂಪರ್ಕ ಕಡಿತಗೊಂಡರೂ ಕರೆ ಕಟ್ ಆಗುವುದಿಲ್ಲ. ಅದು ತಾನಾಗಿಯೇ ಮೊಬೈಲ್ ನೆಟ್‌ವರ್ಕ್‌ಗೆ ಬದಲಾಗುತ್ತದೆ.

ಎಲ್ಲಾ ಸ್ಮಾರ್ಟ್‌ಫೋನ್‌ಗಳಿಗೆ ಲಭ್ಯ: ಇತ್ತೀಚಿನ ಬಹುತೇಕ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ಈ ಸೌಲಭ್ಯ ಕೆಲಸ ಮಾಡಲಿದೆ.

ನಿಮ್ಮ ಫೋನ್‌ನಲ್ಲಿ ಈ ಸೇವೆಯನ್ನು ಪಡೆಯಲು ಸರಳವಾದ ಈ ಹಂತಗಳನ್ನು ಅನುಸರಿಸಿ:

ನಿಮ್ಮ ಮೊಬೈಲ್‌ನ Settings ಗೆ ಹೋಗಿ. Network/Connectivity ಅಥವಾ SIM & Network ಆಯ್ಕೆಯನ್ನು ಕ್ಲಿಕ್ ಮಾಡಿ. ಅಲ್ಲಿರುವ Wi-Fi Calling ಆಯ್ಕೆಯನ್ನು ಆನ್ ಮಾಡಿ. ನಿಮ್ಮ ಫೋನ್ ವೈ-ಫೈಗೆ ಕನೆಕ್ಟ್ ಆಗಿರುವುದನ್ನು ಖಚಿತಪಡಿಸಿಕೊಳ್ಳಿ.

ಒಂದು ವೇಳೆ ನಿಮಗೆ ಸೆಟ್ಟಿಂಗ್ ಬದಲಿಸಲು ಕಷ್ಟವಾದರೆ ಅಥವಾ ನಿಮ್ಮ ಫೋನ್ ಈ ಸೇವೆಗೆ ಪೂರಕವಾಗಿದೆಯೇ ಎಂದು ತಿಳಿಯಲು ಬಿಎಸ್ಎನ್ಎಲ್ ಗ್ರಾಹಕ ಕೇಂದ್ರಕ್ಕೆ ಭೇಟಿ ನೀಡಬಹುದು ಅಥವಾ ಟೋಲ್-ಫ್ರೀ ಸಂಖ್ಯೆ 1800-150-3 ಗೆ ಕರೆ ಮಾಡಬಹುದು.

error: Content is protected !!