ಹೊಸದಿಗಂತ ಡಿಜಿಟಲ್ ಡೆಸ್ಕ್:
ಲಂಡನ್‌ನ ಲಾರ್ಡ್ಸ್ ಮೈದಾನದಲ್ಲಿ ಗುರುವಾರ ಜುಲೈ 10ರಿಂದ ಆರಂಭವಾದ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ ಆರಂಭಿಕ ಆಘಾತ ತಕ್ಷಣವೇ ಎದುರಾದರು. ಆರಂಭಿಕರು ಬೆನ್ ಡಕೆಟ್ (23) ಮತ್ತು ಜಾಕ್ ಕ್ರಾಲಿ (18) ಸಣ್ಣ ಮೊತ್ತಕ್ಕೆ ಪೆವಿಲಿಯನ್ ಸೇರಿದರು. ಭಾರತದ ಯುವ ಬೌಲರ್ ನಿತಿಶ್ ರೆಡ್ಡಿಯವರ ಗಮನಾರ್ಹ ಬೌಲಿಂಗ್ ಮೂಲಕ ಈ ಆರಂಭಿಕ ಜೋಡಿ ಔಟಾಗಿದರು.
ತಂಡ ಸಂಕಷ್ಟದಲ್ಲಿದ್ದಾಗ, ಆರಂಭದಿಂದಲೇ ನಿಖರವಾಗಿ ಆಟ ಆಡಿದ ಜೋ ರೂಟ್, ಓಲಿ ಪೋಪ್ ಜೊತೆಗೂಡಿ ಇನ್ನಿಂಗ್ಸ್‌ಗೆ ಕಲೆ ಹಾಕಿದರು. ಅದ್ಭುತ ಆಟದ ಮೂಲಕ ಜೋ ಅರ್ಧಶತಕ ಸಿಡಿಸಿ ಮಿಂಚಿದರು. ಈ ಪ್ರದರ್ಶನದೊಂದಿಗೆ ಅವರು ಭಾರತೀಯ ತಂಡದ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ಅಪ್ರತಿಮ ದಾಖಲೆಯೊಂದನ್ನು ನಿರ್ಮಿಸಿದರು.
ಜೋ ರೂಟ್, ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ವಿರುದ್ಧ ಒಟ್ಟು 3000 ರನ್ ಗಡಿಯನ್ನು ದಾಟಿದ ವಿಶ್ವದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದು ಯಾರೂ ಸಾಧಿಸದ ದಾಖಲೆ. ಇದುವರೆಗೆ ಆಸ್ಟ್ರೇಲಿಯಾ ಆಟಗಾರ ರಿಕಿ ಪಾಂಟಿಂಗ್ (2555 ರನ್) ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರು. ಆದರೆ ಈಗ ರೂಟ್ ಅವರು ಅವರನ್ನು ಹಿಂದಿಕ್ಕಿ ದಾಖಲೆ ರಚಿಸಿದ್ದಾರೆ.
ಈ ಪಂದ್ಯದಲ್ಲಿ ಸಿಡಿಸಿದ ಅರ್ಧಶತಕ ಜೋ ರೂಟ್ ಅವರ ಭಾರತದ ವಿರುದ್ಧದ 13ನೇ ಅರ್ಧಶತಕವಾಗಿದ್ದು, ಇಂದಿಗೂ ಯಾವುದೇ ಕ್ರಿಕೆಟಿಗ ಸಾಧಿಸದ ಸಾಧನೆಯಾಗಿದೆ. ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ 11 ಅರ್ಧಶತಕಗಳೊಂದಿಗೆ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಇದು ಅವರ ತಾಳ್ಮೆ ಹಾಗೂ ಭಾರತದ ವಿರುದ್ಧದ ಸ್ಫೋಟಕ ಬ್ಯಾಟಿಂಗ್ ಶೈಲಿಗೆ ಸಾಕ್ಷಿಯಾಗಿದೆ.
ಭಾರತೀಯ ಬೌಲಿಂಗ್ ದಾಳಿಗೆ ತಿರುಗೇಟು ನೀಡುತ್ತಿರುವ ಜೋ ರೂಟ್ ಅವರ ಬ್ಯಾಟಿಂಗ್, ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡಕ್ಕೆ ಭರವಸೆ ಮೂಡಿಸುತ್ತಿದೆ. ಉಳಿದ ಇನಿಂಗ್ಸ್‌ಗಳು ಹೇಗೆ ಸಾಗುತ್ತದೆ ಎಂಬ ಕುತೂಹಲ ಕ್ರೀಡಾ ಪ್ರೇಮಿಗಳಲ್ಲಿ ಮುಂದುವರಿದಂತಿದೆ.