ಹೊಸದಿಗಂತ ಡಿಜಿಟಲ್ ಡೆಸ್ಕ್:
WWE ಇತಿಹಾಸ ಕಂಡ ಶ್ರೇಷ್ಠ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರಾದ 17 ಬಾರಿ ವಿಶ್ವ ಚಾಂಪಿಯನ್ ಜಾನ್ ಸೆನಾ ಅವರು ತಮ್ಮ ಸುದೀರ್ಘ ಕುಸ್ತಿ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ. ಶನಿವಾರ ರಾತ್ರಿ ನಡೆದ ಅವರ ವಿದಾಯ ಪಂದ್ಯದಲ್ಲಿ ಪ್ರಸ್ತುತ ಇಂಟರ್‌ಕಾಂಟಿನೆಂಟಲ್ ಚಾಂಪಿಯನ್ ಗುಂಥರ್ ವಿರುದ್ಧ ಸೋಲು ಅನುಭವಿಸುವ ಮೂಲಕ WWE ರಿಂಗ್‌ಗೆ ಭಾವನಾತ್ಮಕ ವಿದಾಯ ಹೇಳಿದ್ದಾರೆ.
2002ರ ಜೂನ್ 27 ರಂದು ಸ್ಮ್ಯಾಕ್‌ಡೌನ್‌ನಲ್ಲಿ ಪದಾರ್ಪಣೆ ಮಾಡಿದ ಜಾನ್ ಸೆನಾ, ಮುಂದಿನ ಎರಡು ದಶಕಗಳಲ್ಲಿ WWE ಪ್ರಪಂಚದ ಅತ್ಯಂತ ಪ್ರೀತಿಪಾತ್ರ ಮತ್ತು ಜನಪ್ರಿಯ ಮುಖವಾಗಿ ಬೆಳೆದರು. ಅವರು 17 ಬಾರಿ WWE ವಿಶ್ವ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದು, ಇದು ಕಂಪನಿಯ ಇತಿಹಾಸದಲ್ಲಿ ಯಾರೂ ತಲುಪದ ದಾಖಲೆಯಾಗಿದೆ. ಇದರ ಜೊತೆಗೆ, ಆರು ಬಾರಿ ರೆಸಲ್‌ಮೇನಿಯಾದ ಮುಖ್ಯ ಪಂದ್ಯದಲ್ಲಿ ಭಾಗವಹಿಸಿ, ಇಂಟರ್‌ಕಾಂಟಿನೆಂಟಲ್ ಪ್ರಶಸ್ತಿ ಸೇರಿದಂತೆ ಎಲ್ಲಾ ಪ್ರಮುಖ ಚಾಂಪಿಯನ್‌ಶಿಪ್‌ಗಳನ್ನು ಗೆಲ್ಲುವ ಮೂಲಕ ಗ್ರ್ಯಾಂಡ್ ಸ್ಲಾಮ್ ಸಾಧನೆಯನ್ನು ಪೂರ್ಣಗೊಳಿಸಿದ್ದಾರೆ. ಸೀನಾ ಅವರು ಕುಸ್ತಿಯ ಹೊರತಾಗಿ ಯಶಸ್ವಿ ಹಾಲಿವುಡ್ ನಟರಾಗಿಯೂ ಗುರುತಿಸಿಕೊಂಡಿದ್ದಾರೆ.
ತಮ್ಮ 23 ವರ್ಷಗಳ ಅದ್ಭುತ ವೃತ್ತಿಜೀವನಕ್ಕೆ ಒಂದು ಶ್ರೇಷ್ಠ ಗೆಲುವಿನೊಂದಿಗೆ ವಿದಾಯ ಹೇಳಬೇಕೆಂದು ಅಭಿಮಾನಿಗಳು ಬಯಸಿದ್ದರು. ಆದರೆ, ಗುಂಥರ್ ವಿರುದ್ಧ ಸೋಲನ್ನು ಒಪ್ಪಿಕೊಂಡಿರುವುದು ವಿಶ್ವದಾದ್ಯಂತದ ಫ್ಯಾನ್ಸ್‌ಗಳಲ್ಲಿ ಸ್ವಲ್ಪ ನಿರಾಶೆ ಮೂಡಿಸಿದೆ.

