ಹೊಸದಿಗಂತ ಡಿಜಿಟಲ್ ಡೆಸ್ಕ್
ಆಸ್ಟ್ರೇಲಿಯಾದಲ್ಲಿ ಸಾಗುತ್ತಿರುವ ಟಿ 20 ವಿಶ್ವಕಪ್ ಗಾಯಾಳುಗಳ ವಿಶ್ವಕಪ್ ಆಗಿ ಮಾರ್ಪಟ್ಟಿದೆ. ವಿಶ್ವಕಪ್ ಗೆ ವಿದ್ಯುಕ್ತವಾಗಿ ಚಾಲನೆ ಸಿಗುವ ಮುನ್ನವೇ ಡಜನ್ ಗಿಂತಲೂ ಹೆಚ್ಚಿನ ಸ್ಟಾರ್ ಆಟಗಾರರು ಗಾಯದ ಸಮಸ್ಯೆಯಿಂದ ಹೊರನಡೆದಿದ್ದಾರೆ. ಈಗ ಅತಿಥೇಯ ರಾಷ್ಟ್ರದ ಸ್ಟಾರ್ ಆಟಗಾರನ ಸರದಿ… ಬುಧವಾರ ಸಿಡ್ನಿಯಲ್ಲಿ ಗಾಲ್ಫ್ ಆಡುವಾಗ ಕೈಗೆ ಬಲವಾದ ಗಾಯ ಮಾಡಿಕೊಂಡಿರುವ ಆಸ್ಟ್ರೇಲಿಯಾದ ಬ್ಯಾಕ್-ಅಪ್ ವಿಕೆಟ್ ಕೀಪರ್ ಜೋಶ್ ಇಂಗ್ಲಿಸ್ ಟಿ20 ವಿಶ್ವಕಪ್‌ನಿಂದ ಹೊರಬಿದ್ದಿದ್ದಾರೆ.
ತಮ್ಮ 15 ಜನರ ವಿಶ್ವಕಪ್ ತಂಡದಲ್ಲಿ ಮುಖ್ಯ ವಿಕೆಟ್‌ಕೀಪರ್ ಮ್ಯಾಥ್ಯೂ ವೇಡ್‌ಗೆ ಬ್ಯಾಕಪ್ ಆಗಿ ಇಂಗ್ಲಿಸ್ ರನ್ನು ಆಯ್ಕೆ ಮಾಡಲಾಗಿತ್ತು. ತಂಡದ ಸಹ ಆಟಗಾರರೊಂದಿಗೆ ಬುಧವಾರ ಬೆಳಗ್ಗೆ ಗಾಲ್ಫ್ ಆಡುತ್ತಿದ್ದಾಗ ಇಂಗ್ಲಿಸ್ ಕೈಗೆ ಪೆಟ್ಟು ಮಾಡಿಕೊಂಡಿದ್ದಾರೆ.
ಶನಿವಾರ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧ ಆಡುವ ಮೂಲಕ ಆಸ್ಟ್ರೇಲಿಯಾ ತನ್ನ ಅಭಿಯಾನವನ್ನು ಆರಂಭಿಸಲಿದೆ. ಇದೀಗ ಇಂಗ್ಲಿಸ್ ಆಸ್ಪತ್ರೆ ಸೇರಿದ್ದು, ಗಾಯದ ತೀವ್ರತೆ ಅಸ್ಪಷ್ಟವಾಗಿದೆ. ಈ ಹಂತದಲ್ಲಿ ಐಸಿಸಿ ಕೇವಲ 15 ಆಟಗಾರರರಿಗಷ್ಟೇ ಅನುಮತಿಸಿಸುತ್ತದೆ. ಆದ್ದರಿಂದ ಇಂಗ್ಲಿಸ್ ಅನುಪಸ್ಥಿತಿ ಆಸೀಸ್ ಪಾಳೆಯಕ್ಕೆ ದೊಡ್ಡ ಹೊಡೆತವಾಗಲಿದೆ.
ಈಗಾಗಲೇ ಗಾಯದ ಹೊಡೆತದಿಂದ ಕಂಗಾಲಾಗಿರುವ ಆಸೀಸ್ ತಂಡಕ್ಕೆ ಇಂಗ್ಲಿಸ್ ಅವರ ಗಾಯವು ಇನ್ನಷ್ಟು ಸಂಕಟಗಳನ್ನು ತಂದಿಡ್ಡಿದೆ. ಯುವ ಆಟಗಾರ ಕ್ಯಾಮರೂನ್ ಗ್ರೀನ್ ಗಾಯಗೊಂಡಿದ್ದರೆ, ಪ್ರಮುಖ ಆಲ್‌ರೌಂಡರ್‌ಗಳಾದ ಮಿಚ್ ಮಾರ್ಷ್ ಮತ್ತು ಮಾರ್ಕಸ್ ಸ್ಟೊಯಿನಿಸ್ ಕಳಪೆ ಫಿಟ್‌ನೆಸ್, ಅನುಭವಿ ಆರಂಭಿಕ ಆಟಗಾರ ಡೇವಿಡ್ ವಾರ್ನರ್‌ಗೆ ಇತ್ತೀಚೆಗೆ ಗಾಯಗೊಂಡಿರುವುದು ಆಯ್ಕೆದಾರರಿಗೆ ತಲೆನೋವಾಗಿ ಪರಿಣಮಿಸಿದೆ.
ಅಂದಹಾಗೆ, ಇಂಗ್ಲಿಸ್ ಗಾಲ್ಫ್ ಆಡಿ ಈ ವಿಶ್ವಕಪ್ ನಿಂದ ಹೊರಬಿದ್ದ ಎರಡನೇ ಆಟಗಾರ. ಕೆಲದಿನಗಳ ಹಿಂದೆ ಇಂಗೆಂಡ್ ಸ್ಟಾರ್ ಪ್ಲೆಯರ್ ಜಾನಿ ಬೈರ್‌ಸ್ಟೋ ಗಾಲ್ಫ್ ಕೋರ್ಸ್‌ನಲ್ಲಿ ಜಾರಿಬಿದ್ದು ಟೂರ್ನಿಯನ್ನು ತಪ್ಪಿಸಿಕೊಂಡಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ