ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರು ನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಒಳ್ಳೆಯ ವಿಷಯಗಳಿಂದ ಕೂಡಿದೆ. ಆದರೆ ಮಾಧ್ಯಮಗಳಲ್ಲಿ ಸಕಾರಾತ್ಮಕ ವಿಷಯಗಳ ಪ್ರತಿಫಲನ ಕಡಿಮೆ ಇದೆ. ಮಾದ್ಯಮಗಳು ಮತ್ತು ಮಾಧ್ಯಮ ಪ್ರತಿನಿಗಳು ಇಲ್ಲಿಯ ಸಕಾರಾತ್ಮಕ ವಿಷಯಗಳ ಕುರಿತು ಹೆಚ್ಚೆಚ್ಚು ಬರೆಯುವ ಮೂಲಕ ಈ ಭಾಗದ ಅಭಿವೃದ್ಧಿಯಲ್ಲಿ ಕೈಜೋಡಿಸ ಬೇಕು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲದೀಪ್‌ಕುಮಾರ್ ಜೈನ್ ಹೇಳಿದ್ದಾರೆ.
ಅವರು ಶನಿವಾರ ಇಲ್ಲಿನ ಪತ್ರಿಕಾ ಭವನದಲ್ಲಿ ‘ಬ್ರ್ಯಾಂಡ್ ಮಂಗಳೂರು’ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡುತ್ತಿದ್ದರು.
ಇದೇ ವೇಳೆ ಕನ್ನಡ ಪತ್ರಿಕಾ ದಿನಾಚರಣೆಯ ಅಂಗವಾಗಿ ಡಾ.ಸದಾನಂದ ಪೆರ್ಲ ‘ಅಭ್ಯುದಯ ಪತ್ರಿಕೋದ್ಯಮ’ದ ಕುರಿತಾಗಿ ವಿಶೇಷ ಉಪನ್ಯಾಸ ನೀಡಿದರು.
ಹೊಸ ದಿಗಂತ ದಿನಪತ್ರಿಕೆಯ ವರದಿಗಾರ ಸುರೇಶ್ ಡಿ.ಪಳ್ಳಿ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ಸುದ್ದಿವಾಹಿನಿಯ ಪ್ರತಿನಿಧಿ ಭರತರಾಜ್ ಸನಿಲ್ ಅವರಿಗೆ 2023ನೇ ಸಾಲಿನ ‘ಬ್ರ್ಯಾಂಡ್ ಮಂಗಳೂರು’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ವಿಜೇತ ಪತ್ರಕರ್ತರು ತಮ್ಮ ಅನಿಸಿಕೆ ವ್ಯಕ್ತ ಪಡಿಸಿ ಪ್ರಶಸ್ತಿ ಬಂದಿರುವುದು ಖುಷಿ ಕೊಟ್ಟಿದೆ. ಜೊತೆಗೆ ಪತ್ರಕರ್ತರಾಗಿ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದರು.
ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರಿಪ್ರಸಾದ್ ರೈ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್ ಉಪಸ್ಥಿತರಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು. ಹಿರಿಯ ಪತ್ರಕರ್ತ ಮಹಮ್ಮದ್ ಆರಿಫ್ ಕಾರ್ಯಕ್ರಮ ನಿರ್ವಹಿಸಿದರು.