ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇ 7ರಂದು ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂದೂರ್ ಕಾರ್ಯಾಚರಣೆ ಕೇವಲ 23 ನಿಮಿಷಗಳಲ್ಲಿ ಪೂರ್ಣಗೊಳಿಸಲಾಗಿದೆ. ಈ ವೇಳೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ (POK) ಒಳಗೆ ಇದ್ದ ಭಯೋತ್ಪಾದಕರ ನೆಲೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶ್ಲಾಘಿಸಿದರು.
ಭುಜ್ ವಾಯುಪಡೆ ನಿಲ್ದಾಣಕ್ಕೆ ಸೋಮವಾರ ಭೇಟಿ ನೀಡಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಪಾಕಿಸ್ತಾನ ಮೂಲದ ಭಯೋತ್ಪಾದಕರ ನೆಲೆಗಳನ್ನು ಕೇವಲ 23 ನಿಮಿಷಗಳಲ್ಲಿ ಪುಡಿಪುಡಿ ಮಾಡಲಾಗಿದೆ. ಈ ಸಂದರ್ಭದಲ್ಲಿ ಭಾರತೀಯ ವಾಯುಪಡೆ ಪ್ರದರ್ಶಿಸಿದ ನಿಖರತೆ ಮತ್ತು ವೇಗವನ್ನು ಅವರು ಶ್ಲಾಘಿಸಿದರು.
ಸೇನಾ ಸಿಬ್ಬಂದಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಆಪರೇಷನ್ ಸಿಂದೂರ್ ಕಾರ್ಯಾಚರಣೆ ವೇಳೆ ಭಾರತೀಯ ವಾಯುಪಡೆಯ ನಿಖರತೆ ಮತ್ತು ವೇಗವನ್ನು ಶ್ಲಾಘಿಸಿ, ಈ ಕಾರ್ಯಾಚರಣೆಯು ಭಾರತದ ಮಿಲಿಟರಿ ಶಕ್ತಿಯನ್ನು ಜಗತ್ತಿಗೆ ಪ್ರದರ್ಶಿಸಿತು ಮತ್ತು ಗಡಿಯಾಚೆಯಿಂದ ಹೊರಹೊಮ್ಮುವ ಭಯೋತ್ಪಾದನೆಯನ್ನು ದಾಖಲೆಯ ಸಮಯದಲ್ಲಿ ಹತ್ತಿಕ್ಕಿತು ಎಂದು ಘೋಷಿಸಿದರು. ಉಪಹಾರ ಸೇವಿಸಲು ತೆಗೆದುಕೊಳ್ಳುವ ಸಮಯದಲ್ಲಿ ನೀವು ಶತ್ರುಗಳನ್ನು ಸಂಹರಿಸಿದ್ದೀರಿ ಎಂದು ರಾಜನಾಥ್ ಸಿಂಗ್ ಹೇಳಿದಾಗ ಹಾಜರಿದ್ದ ಸಿಬ್ಬಂದಿ ಜೋರಾಗಿ ಚಪ್ಪಾಳೆ ತಟ್ಟಿದರು.
ಆಪರೇಷನ್ ಸಿಂದೂರ್ ಸಮಯದಲ್ಲಿ ನೀವು ಏನೇ ಮಾಡಿದರೂ ಅದು ಎಲ್ಲಾ ಭಾರತೀಯರನ್ನು ಹೆಮ್ಮೆಪಡುವಂತೆ ಮಾಡಿದೆ. ಪಾಕಿಸ್ತಾನದಲ್ಲಿ ಪೋಷಿಸಲಾದ ಭಯೋತ್ಪಾದಕ ಮೂಲಸೌಕರ್ಯವನ್ನು ಕೆಡವಲು ಭಾರತೀಯ ವಾಯುಪಡೆಗೆ ಕೇವಲ 23 ನಿಮಿಷಗಳು ಬೇಕಾಗಿತ್ತು ಎಂದು ತಿಳಿಸಿದರು.
ನಮ್ಮ ವಾಯುಪಡೆಯ ಯೋಧರು ಮಾಡಿದ್ದಕ್ಕೆ ಇಡೀ ಜಗತ್ತು ಬೆರಗಾಗಿದೆ. ನೀವು ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ಮಾಡಿದ್ದೀರಿ ಮಾತ್ರವಲ್ಲ ಭಾರತ ಭಯೋತ್ಪಾದನೆಯನ್ನು ಸಹಿಸುವುದಿಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ನೀವು ಕಳುಹಿಸಿದ್ದೀರಿ. ಭಯೋತ್ಪಾದನೆ ವಿರುದ್ಧ ಭಾರತ ನಿಖರತೆ ಮತ್ತು ಬಲದಿಂದ ಪ್ರತಿದಾಳಿ ಮಾಡುತ್ತದೆ ಎಂಬುದನ್ನು ಸಾಬೀತು ಪಡಿಸಿದ್ದೀರಿ ಎಂದು ಹೇಳಿದರು.