ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಎಲ್ಲ ಹಳೆಯ ವಾಹನಗಳಿಗೆ ಸುರಕ್ಷಿತ ನೋಂದಣಿ ಫಲಕ (ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ (HSRP Number Plate) ಕಡ್ಡಾಯವಾಗಿ ಅಳವಡಿಸಲು ಇದ್ದ ಗಡುವು ಇನ್ನೂ ಎರಡೇ ದಿನದಲ್ಲಿ ಮುಕ್ತಾಯವಾಗಲಿದೆ.
ಈ ಹಿಂದೆ ಫೆಬ್ರವರಿ 17ಕ್ಕೆ ಇದ್ದ ನೋಂದಣಿ ಗಡುವನ್ನು ರಾಜ್ಯ ಸರ್ಕಾರ ಮೇ 31ಕ್ಕೆ ವಿಸ್ತರಣೆ ಮಾಡಿತ್ತು. ಬಳಿಕ ಜೂನ್ 12ರವರೆಗೆ ಗಡುವು ನೀಡಿದ್ದು, ಇನ್ನೆರಡು ದಿನದಲ್ಲಿ ಮುಕ್ತಾಯವಾಗಲಿದೆ.
ನೋಂದಣಿ ಮಾಡಿಸಿಕೊಳ್ಳದ ವಾಹನ ಸವಾರರ ವಿರುದ್ಧ ಕ್ರಮ ಜರುಗಿಸುವ ತೀರ್ಮಾನಕ್ಕೆ ಸಾರಿಗೆ ಇಲಾಖೆ ಬಂದಿದೆ. ಮೊದಲ ಬಾರಿಗೆ ಸಿಕ್ಕಿಬಿದ್ದರೆ 500 ರೂಪಾಯಿ ದಂಡ, ಎರಡನೇ ಬಾರಿ ಸಿಕ್ಕಿಬಿದ್ದರೆ 1000 ರೂಪಾಯಿಗೆ ಏರಿಕೆ ಮಾಡುವ ನಿಟ್ಟಿನಲ್ಲಿ ನಿರ್ಧಾರವನ್ನು ತೆಗೆದುಕೊಳ್ಳಲು ಚಿಂತಿಸಲಾಗಿದೆ.
ರಾಜ್ಯದಲ್ಲಿ 2019ರ ಏಪ್ರಿಲ್ 1ಕ್ಕಿಂತ ಮೊದಲು ನೋಂದಾಯಿಸಲ್ಪಟ್ಟ (ಹಳೆಯ / ಅಸ್ತಿತ್ವದಲ್ಲಿರುವ ವಾಹನಗಳು) ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು, ಲಘು ಮೋಟಾರು ವಾಹನ, ಪ್ರಯಾಣಿಕ ಕಾರು, ಮಧ್ಯಮ ಮತ್ತು ಭಾರೀ ವಾಣಿಜ್ಯ ವಾಹನ, ಟ್ರೈಲರ್, ಟ್ರ್ಯಾಕ್ಟರ್ ಇತ್ಯಾದಿ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕಗಳನ್ನು ಅಳವಡಿಸುವುದು ಕಡ್ಡಾಯ ಮಾಡಿ ರಾಜ್ಯ ಸರ್ಕಾರ ಆದೇಶಿಸಿತ್ತು.