ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶಕ್ಕಾಗಿ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುವ ಯೋಧರ ಕುಟುಂಬಗಳಿಗೆ ಇದೀಗ ನ್ಯಾಯದ ಮೊರೆ ಹೋಗಲು ಸರ್ಕಾರ ನೆರವಾಗಲಿದೆ. ಭಾರತೀಯ ಸೈನಿಕರು ಮತ್ತು ಅವರ ಪರಿವಾರಗಳು ಕಾನೂನು ಹೋರಾಟದಲ್ಲಿ ಸಂಕಷ್ಟ ಅನುಭವಿಸದಂತೆ, ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (NALSA) ಹೊಸ ಯೋಜನೆಯನ್ನು ಜಾರಿಗೊಳಿಸುತ್ತಿದೆ. ‘ವೀರ ಪರಿವಾರ ಸಹಾಯತಾ ಯೋಜನೆ 2025’ ಎಂಬ ಹೆಸರಿನಲ್ಲಿ ಜಾರಿಗೆ ಬರಲಿರುವ ಈ ಯೋಜನೆಯಡಿ, ಹಾಲಿ ಹಾಗೂ ನಿವೃತ್ತ ಯೋಧರಿಗೆ ಭೂ ವಿವಾದ, ಕೌಟುಂಬಿಕ ಕಲಹ ಹಾಗೂ ಇತರೆ ಕಾನೂನು ವಿಷಯಗಳಲ್ಲಿ ಉಚಿತ ನೆರವು ನೀಡಲಾಗುತ್ತದೆ.
ಈ ಯೋಜನೆಗೆ ಶಕ್ತಿ ತುಂಬಿರುವವರು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಹಾಗೂ ನಲ್ಸಾದ ಕಾರ್ಯಾಧ್ಯಕ್ಷರಾದ ನ್ಯಾಯಾಧೀಶ ಸೂರ್ಯಕಾಂತ್. ಪಾಕಿಸ್ತಾನ ವಿರುದ್ಧದ ಆಪರೇಷನ್ ಸಿಂದೂರಲ್ಲಿ ಭಾರತೀಯ ಸೇನೆ ತೋರಿದ ಸಾಹಸದಿಂದ ಪ್ರಭಾವಿತರಾಗಿ ಅವರು ಈ ಯೋಜನೆಯ ಯೋಚನೆಯನ್ನು ತಂದಿದ್ದಾರೆ. ನ್ಯಾಯ ವ್ಯವಸ್ಥೆಯು ರಾಷ್ಟ್ರಸೇವಕರ ಬೆಂಬಲಕ್ಕೆ ನಿಂತು, ಅವರ ಕುಟುಂಬದ ಹಕ್ಕುಗಳ ರಕ್ಷಣೆಗೆ ಮುಂದಾಗಬೇಕು ಎಂಬ ನಿಲುವಿನಿಂದ ಈ ಯೋಜನೆ ರೂಪಿಸಲಾಗಿದೆ. 2025ರ ನವೆಂಬರ್ 24ರಂದು ಈ ಯೋಜನೆ ಅಧಿಕೃತವಾಗಿ ಜಾರಿಗೊಳ್ಳಲಿದೆ.
ಸೈನಿಕರು ತಮ್ಮ ಕರ್ತವ್ಯದ ನಿಮಿತ್ತ ವರ್ಷದಲ್ಲಿ ಹಲವಾರು ತಿಂಗಳು ಮನೆಗೆ ದೂರವಾಗಿರುವುದರಿಂದ ಭೂಮಿಯ ವಿವಾದ, ಆಸ್ತಿ ಹಕ್ಕುಗಳು ಅಥವಾ ಕುಟುಂಬ ಕಲಹಗಳು ನ್ಯಾಯಾಲಯದ ಮೆಟ್ಟಿಲಿಗೆ ಹೋಗಿದ್ರೆ, ಸೈನಿಕರಿಗೆ ಸಮಯ ಹೊಂದಿಸಿಕೊಳ್ಳುವುದು ಕಷ್ಟಕರ. ಕೆಲವೊಮ್ಮೆ ಅವರ ಕುಟುಂಬಗಳು ಕೂಡ ಸೂಕ್ತ ಕಾನೂನು ನೆರವಿಲ್ಲದೇ ತೊಂದರೆ ಅನುಭವಿಸುತ್ತಿವೆ. ಇಂತಹ ಸಂದರ್ಭಗಳಲ್ಲಿ ನಲ್ಸಾ ಮಧ್ಯಸ್ಥಿಕೆಯೊಂದಿಗೆ ಉಚಿತವಾಗಿ ನೆರವಾಗಲಿದೆ. ಈ ಸೌಲಭ್ಯ ಬಿಎಸ್‌ಎಫ್, ಸಿಆರ್‌ಪಿಎಫ್, ಐಟಿಬಿಪಿ ಸೇರಿದಂತೆ ಎಲ್ಲಾ ಅರೆಸೈನಿಕ ಪಡೆಗಳಿಗೂ ಲಭ್ಯವಿರಲಿದೆ.