ಹೊಸದಿಗಂತ ವರದಿ, ಮಂಡ್ಯ :
ಕೃಷ್ಣರಾಜಸಾಗರ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು,ಯಾವುದೇ ಕ್ಷಣದಲ್ಲಿ 1 ಲಕ್ಷಕ್ಕೂ ಹೆಚ್ಚಿನ ಪ್ರಮಾಣದ ನೀರನ್ನು ನದಿಗೆ ಹರಿಯಬಿಡುವ ಸಾಧ್ಯತೆಗಳಿದ್ದು, ನದಿ ಪಾತ್ರದ ಜನರಿಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ.
ಜಲಾಶಯದಿಂದ ಪ್ರಸ್ತುತ 40 ಸಾವಿರ ಕ್ಯುಸೆಕ್‌ಗೂ ಹೆಚ್ಚು ನೀರನ್ನು ನದಿಗೆ ಹರಿಯಬಿಡಲಾಗುತ್ತಿದೆ. ಹೇಮಾವತಿ ಮತ್ತು ಹಾರಂಗಿ ಅಣೆಕಟ್ಟೆಗಳು ಭರ್ತಿಯಾಗಿರುವುದರಿಂದ ಹೆಚ್ಚು ನೀರು ಜಲಾಶಯದ ಕಡೆಗೆ ಹರಿದುಬರುತ್ತಿದೆ. ಹೀಗಾಗಿ ಅಣೆಕಟ್ಟೆಯಿಂದ 1 ಲಕ್ಷ ಕ್ಯುಸೆಕ್‌ನಿಂದ 1.50 ಲಕ್ಷ ಕ್ಯುಸೆಕ್‌ವರೆಗೆ ನೀರು ಹರಿಯಬಿಡುವ ಸಾಧ್ಯತೆಗಳಿರುವುದರಿಂದ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಎಚ್ಚರಿಕೆ ನೀಡಿದ್ದಾರೆ.
ಜಲಾಶಯದಿಂದ ಹೆಚ್ಚು ನೀರನ್ನು ಹರಿಯಬಿಟ್ಟಿರುವುದರಿಂದ ರಂಗನತಿಟ್ಟು ಪಕ್ಷಿಧಾಮದ ಬೋಟಿಂಗ್ ಪಾಯಿಂಟ್ ಮುಳುಗಡೆಯಾಗಿದೆ. ಪಕ್ಷಿಗಳ ಆಶ್ರಯತಾಣವಾದ ನಡುಗಡ್ಡೆಗಳು ಭಾಗಶಃ ಜಲಾವೃತಗೊಂಡಿವೆ. ನೀರು ಮತ್ತಷ್ಟು ಹೆಚ್ಚಾದರೆ ವಾಕಿಂಗ್ ಪಾಥ್‌ಗೂ ನೀರು ನುಗ್ಗುವ ಸಾಧ್ಯತೆಗಳಿವೆ. ಪ್ರವಾಸಿಗರ ವೀಕ್ಷಣೆಗೂ ನಿರ್ಬಂಧ ವಿಧಿಸಲಾಗಿದ್ದು, ಗೇಟ್ ಬಳಿಯೇ ಪ್ರವಾಸಿಗರನ್ನ ತಡೆದು ಹೊರಗೆ ಕಳುಹಿಸಲಾಗುತ್ತಿದೆ.