ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ ಕಡಬ ಕಾಲೇಜು ಆವರಣದಲ್ಲಿ ನಡೆದ ಆಸಿಡ್ ದಾಳಿ ಪ್ರಕರಣದ ಕುರಿತಾದ ಇನ್ನಷ್ಟು ಆಘಾತಕಾರಿ ಮಾಹಿತಿಗಳು ಹೊರಬೀಳುತ್ತಿವೆ.
ಆರೋಪಿ ಕೇರಳದ ಮಲಪ್ಪ್ಪುರಂ ಜಿಲ್ಲೆಯ ನೆಲಂಬೂರು ನಿವಾಸಿ ಎಂಬಿಎ ವಿದ್ಯಾರ್ಥಿ ಅಬೀನ್ (23) ಕೃತ್ಯ ನಡೆಸಲು ಇದೇ ಕಾಲೇಜಿನ ಸಮವಸ್ತ್ರದಲ್ಲಿ ಬಂದಿದ್ದ ಎಂಬುದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ.
ಸೋಮವಾರ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಸಜ್ಜಾಗುತ್ತಿದ್ದರು. ಈ ವೇಳೆ ಕಡಬ ಕಾಲೇಜಿನ ಬಿಳಿ ಅಂಗಿ ಮತ್ತು ನೀಲಿ ಪ್ಯಾಂಟ್ ಹೋಲುವ ಸಮವಸ್ತ್ರ ಧರಿಸಿ ಬಂದಿದ್ದ ಅಬೀನ್, ಇತರ ವಿದ್ಯಾರ್ಥಿಗಳೊಂದಿಗೆ ಜಗಲಿಯಲ್ಲಿ ಕುಳಿತಿದ್ದ ಎನ್ನಲಾಗಿದೆ. ಇದೇ ಪರಿಸರದ ಇತರ ಕಾಲೇಜಿನಿಂದಲೂ ಈ ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಬಂದಿದ್ದರಿಂದ ಈತನ ಬಗ್ಗೆ ಯಾರೂ ಅನುಮಾನಗೊಂಡಿರಲಿಲ್ಲ. ಈ ನಡುವೆ ಪ್ರಶ್ನೆ ಪತ್ರಿಕೆಗಳ ಬಂಡಲನ್ನು ಕಚೇರಿಯಲ್ಲಿ ತೆರೆಯುತ್ತಿದ್ದ ಪ್ರಾಂಶುಪಾಲರು ಹಾಗೂ ಉಪನ್ಯಾಸಕರಿಗೆ ವಿದ್ಯಾರ್ಥಿಗಳ ಚೀರಾಟ ಕೇಳಿಸಿದ್ದು, ತಕ್ಷಣ ಧಾವಿಸಿ ಬಂದಾಗ ಈ ಘಟನೆ ನಡೆದೇಹೋಗಿತ್ತು. ಕೃತ್ಯ ನಡೆಸಿ ಪರಾರಿಯಾಗುತ್ತಿದ್ದ ಅಬೀನ್‌ನನ್ನು ವಿದ್ಯಾರ್ಥಿಗಳು ಬೆನ್ನಟ್ಟಿ ಹಿಡಿದು ಕಡಬ ಪೊಲೀಸರಿಗೆ ಒಪ್ಪಿಸಿದ್ದಾರೆ.
ಆರೋಪಿಯು ಘಟನೆಯಲ್ಲಿ ಸಂತ್ರಸ್ತ ವಿದ್ಯಾರ್ಥಿನಿಯ ತಾಯಿ ಊರಾದ ಮಲಪ್ಪುರಂ ನಿವಾಸಿಯಾಗಿದ್ದು, ದೂರದ ಸಂಬಂಧಿಯೂ ಆಗಿದ್ದಾನೆ ಎಂದು ತಿಳಿದುಬಂದಿದೆ. ಈತ ಸಂತ್ರಸ್ತ ಯುವತಿಯನ್ನು ಕಳೆದ ಎರಡು ವರ್ಷದಿಂದ ಪ್ರೀತಿಸುತ್ತಿದ್ದ ಎನ್ನಲಾಗಿದ್ದು, ಪ್ರೀತಿ ನಿರಾಕರಿಸಿದ ಹಿನ್ನಲೆಯಲ್ಲಿ ಈ ದಾಳಿ ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ಮಾಹಿತಿ ಲಭ್ಯವಾಗಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಪುತ್ತೂರು ಉಪವಿಭಾಗಾಧಿಕಾರಿ ಜೊಬಿನ್ ಮಹಾಪಾತ್ರ, ಪುತ್ತೂರು ಡಿವೈಎಸ್ಪಿ ಅರುಣ್ ನಾಗೇಗೌಡ, ಕಡಬ ತಹಶೀಲ್ದಾರ್ ಪ್ರಭಾಕರ್ ಖಜೂರೆ, ಉಪ್ಪಿನಂಗಡಿ ವೃತ್ತ ನಿರೀಕ್ಷಕ ರವಿ.ಬಿ.ಎಸ್., ಕಡಬ ಎಸ್‌ಐ ಅಭಿನಂದನ್ ಎಂ.ಎಸ್. ಭೇಟಿ ನೀಡಿದ್ದು, ವಿಸ್ತೃತ ಮಾಹಿತಿ ಸಂಗ್ರಹಿಸಿದ್ದಾರೆ.