ಹೊಸದಿಗಂತ ವರದಿ,ಮೈಸೂರು:
ಜಮೀನಿನ ಬೇಲಿಗೆ ಅಕ್ರಮವಾಗಿ ನೀಡಿದ್ದ ವಿದ್ಯುತ್ ಸಂಪರ್ಕಕ್ಕೆ ಸಿಲುಕಿ ಕಾಡಾನೆಯೊಂದು ಸಾವಿಗೀಡಾಗಿರುವ ಘಟನೆ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಆನೆಚೌಕೂರು ಮೀಸಲು ಅರಣ್ಯ ವ್ಯಾಪ್ತಿಗೆ ಸೇರಿದ ಮುತ್ತೂರು ಸಮೀಪದ ಮರಳುಕಟ್ಟೆ ಹಾಡಿಯಲ್ಲಿ ನಡೆದಿದೆ. ಘಟನೆಗೆ ಸಂಬoಧಿಸಿದoತೆ ಜಮೀನು ಮಾಲೀಕ ಮಣಿ ಎಂಬಾತನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಜಮೀನು ಮಾಲೀಕ ಮಣಿ ಮರಳುಕಟ್ಟೆ ಹಾಡಿಯಲ್ಲಿ ಜಮೀನು ಹೊಂದಿದ್ದು, ನೀರಾವರಿ ಸೌಲಭ್ಯಕ್ಕಾಗಿ ಬೋರ್ವೆಲ್ ಕೊರೆಸಿದ್ದು, ಕಾಡಂಚಿನ ಗ್ರಾಮವಾದ ಮರಳುಕಟ್ಟೆ ಹಾಡಿಗೆ ದಿನೇದಿನೇ ಆನೆಗಳ ಹಿಂಡು ಜಮೀನಿಗೆ ಧಾವಿಸಿ ಬೆಳೆಯನ್ನು ನಾಶಪಡಿಸುತ್ತಿರುವ ಕಾರಣಕ್ಕೆ ರೋಸುಹೋಗಿ ಆನೆಗಳ ಕಾಟದಿಂದ ತನ್ನ ಬೆಳೆಯನ್ನು ರಕ್ಷಿಸಿಕೊಳ್ಳಲು ತನ್ನ ಜಮೀನಿನ ಸುತ್ತ ಅಳವಡಿಸಿದ್ದ ತಂತಿ ಬೇಲಿಗೆ ಬೋರ್ವೆಲ್ ಗಾಗಿ ಅಳವಡಿಸಿದ್ದ ವಿದ್ಯುತ್ ಸಂಪರ್ಕವನ್ನು ತಂತಿ ಬೇಲಿಗೆ ಅಕ್ರಮವಾಗಿ ಕಲ್ಪಿಸಿ, ಮೇವು ಅರಿಸಿಕೊಂಡು ಜಮೀನಿಗೆ ಬಂದ ಆನೆ ವಿದ್ಯುತ್ ಸ್ಪರ್ಶವಾಗಿ ಸ್ಥಳದಲ್ಲಿಯೇ ಮೃತಪಟ್ಟಿದೆ
ವಿಷಯ ತಿಳಿದ ಎಸಿಎಫ್ ದಯಾನಂದ್, ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ, ಸಹಾಯಕ ಅರಣ್ಯಾಧಿಕಾರಿ ಪ್ರಸನ್ನ ಕುಮಾರ್, ಪಶುವೈದ್ಯಾಧಿಕಾರಿ ಡಾ.ಚಿಟ್ಟಿಯಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿದರು.