ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರದಲ್ಲಿ ಚುನಾವಣೆ ಬಿಸಿ ಏರುತ್ತಿದಂತೆ ರಾಜಕೀಯ ನಾಯಕರು ಮತದಾರರ ಮನ ಗೆಲ್ಲಲು ವಿಭಿನ್ನ ಕಸರತ್ತುಗಳನ್ನು ನಡೆಸುತ್ತಿದ್ದಾರೆ. ಆದರೆ, ಈ ಬಾರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ನಡೆ ಎಲ್ಲರನ್ನೂ ಆಶ್ಚರ್ಯಕ್ಕೊಳಪಡಿಸಿದೆ. ಚುನಾವಣಾ ಪ್ರಚಾರದ ಮಧ್ಯೆ ಅವರು ಬೇಗುಸರಾಜ್‌ನ ಮೀನುಗಾರರ ಸಮಸ್ಯೆಗಳನ್ನು ನೇರವಾಗಿ ಆಲಿಸಲು ತೆರಳಿ, ಬೋಟ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಕೆರೆಗೆ ಜಿಗಿದು ಸ್ವತಃ ಮೀನು ಹಿಡಿದಿದ್ದಾರೆ. ರಾಹುಲ್ ಗಾಂಧಿಯ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಬಿಹಾರ ಚುನಾವಣಾ ಪ್ರಚಾರದ ಸತತ ತೊಡಕುಗಳ ನಡುವೆಯೂ ರಾಹುಲ್ ಗಾಂಧಿ ತಮ್ಮ ಸಮಯವನ್ನು ಮೀನುಗಾರರತ್ತ ತಿರುಗಿಸಿದರು. ವೀಕಾಸಶೀಲ ಇನ್ಸಾನ್ ಪಾರ್ಟಿ (ವಿಐಪಿ) ನಾಯಕ ಮುಕೇಶ್ ಸಹನಿ ಅವರ ಜೊತೆ ಬೋಟ್‌ನಲ್ಲಿ ಕೆರೆಗೆ ತೆರಳಿದ ಅವರು, ಮಧ್ಯಭಾಗಕ್ಕೆ ತಲುಪುತ್ತಿದ್ದಂತೆಯೇ ದಿಢೀರ್ ನೀರಿಗೆ ಧುಮುಕಿದರು. ಬಿಳಿ ಟೀ ಶರ್ಟ್ ಮತ್ತು ಕಾರ್ಗೋ ಪ್ಯಾಂಟ್ ಧರಿಸಿದ ರಾಹುಲ್ ಗಾಂಧಿಯ ಹಿಂದೆ ಸಹನಿ ಕೂಡ ಕೆರೆಗೆ ಜಿಗಿದರು. ಇಬ್ಬರೂ ನೀರಿನಲ್ಲಿ ಈಜಾಡುತ್ತಾ ದಡ ಸೇರಿ, ಬಳಿಕ ಮೀನುಗಾರರ ಜೊತೆ ಸೇರಿ ಬಲೆ ಹಾಕಿ ಮೀನು ಹಿಡಿದರು.
ಮೀನುಗಾರರ ಜೊತೆ ಬೆರೆತು ಮಾತನಾಡಿದ ರಾಹುಲ್ ಗಾಂಧಿ, ಅವರ ಸಂಕಷ್ಟಗಳನ್ನು ಆಲಿಸಿದರು. ಮೀನುಗಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವುದಾಗಿ ಭರವಸೆ ನೀಡಿದ ಅವರು, ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಮೀನುಗಾರರಿಗೆ ವಿಮೆ ಸೌಲಭ್ಯ, ಮೀನುಗಾರಿಕೆ ನಿಷೇಧ ಅವಧಿಯಲ್ಲಿ ಆರ್ಥಿಕ ನೆರವು ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತರುವುದಾಗಿ ಹೇಳಿದರು. ಮೀನುಗಾರಿಕೆಗೆ ನಿಷೇಧ ಇರುವ ಮೂರು ತಿಂಗಳಲ್ಲಿ ಪ್ರತಿ ತಿಂಗಳು 5,000 ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದರು.
ಚುನಾವಣಾ ಪ್ರಚಾರದ ಮಧ್ಯೆ ನಡೆದ ಈ ಘಟನೆ ಬಿಹಾರ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ರಾಹುಲ್ ಗಾಂಧಿಯ ಈ ಅಚ್ಚರಿ ನಡೆ ಮತದಾರರ ಮನ ಗೆಲ್ಲುವ ಹೊಸ ತಂತ್ರವೆಂದು ರಾಜಕೀಯ ವಲಯದಲ್ಲಿ ವಿಶ್ಲೇಷಣೆಗಳು ಕೇಳಿ ಬರುತ್ತಿವೆ.

