ಹೊಸದಿಗಂತ ಬೀದರ್
ಇಲ್ಲಿ ಜರುಗಿದ ಶೂಟೌಟ್, ರಾಬರಿ ಘಟನೆ ನಿಜಕ್ಕೂ ಪೊಲೀಸರ ಹೈ ಟೆನ್ಶನ್ ಗೆ ಕಾರಣವಾಗಿದೆ. ಒಂದು ವಾರ ಕಳೆದರೂ ದರೋಡೆಕೋರರ ಸುಳಿವು ಸಿಕ್ಕಿಲ್ಲ. ಈ ಮಧ್ಯೆ ವಿಶೇಷ ತಂಡದ ನೇತೃತ್ವ ವಹಿಸಿರುವ ಕಲಬುರಗಿ ಡಿಐಜಿ, ಹಿರಿಯ ಐಪಿಎಸ್ ಅಧಿಕಾರಿ ಅಜಯ್ ಹಿಲೋರಿ ದಿಢೀರ್ ಅಸ್ವಸ್ಥರಾಗಿದ್ದು, ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ.
ತಲೆಸುತ್ತು, ಸುಸ್ತಿನ ಕಾರಣಕ್ಕೆ ಅಜಯ್ ಹಿಲೋರಿ ಅವರು ಬುಧವಾರ ರಾತ್ರಿ ಬೀದರ್ ನಗರದ ಮೋಹನ್ ಮಾರ್ಕೆಟ್ ಪ್ರದೇಶದಲ್ಲಿರುವ ಡಾ. ಗುದಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ
ಬಂದಿದ್ದಾರೆ. ಆಸ್ಪತ್ರೆ ಹೃದ್ರೋಗ ತಜ್ಞ ಡಾ.ನಿತಿನ್ ಗುದಗೆ, ಸೀನಿಯರ್ ಫಿಜಿಶಿಯನ್ ಡಾ.ಸಚಿನ್ ಗುದಗೆ ಹಾಗೂ ಹಿರಿಯ ತಜ್ಞ ವೈದ್ಯ ಡಾ.ಚಂದ್ರಕಾಂತ ಗುದಗೆ ತಪಾಸಣೆ ನಡೆಸಿದ್ದಾರೆ.
ಹಿಲೋರಿ ಅವರ ಹೃದಯ ತಪಾಸಣೆ ಮಾಡಲಾಗಿದೆ. ದಿಢೀರ್ ಅಸ್ವಸ್ಥ ಹಿನ್ನೆಲೆಯಲ್ಲಿ ಇವರ ಎಂಜಿಯೋಗ್ರಾಫಿ ಸಹ ಮಾಡಿದ್ದು, ಯಾವುದೇ ಸಮಸ್ಯೆ ಇರುವುದು ಕಂಡುಬಂದಿಲ್ಲ. ಕೆಲಸದ ಒತ್ತಡ, ಅತಿಯಾದ ಸುತ್ತಾಟ, ಬಳಲಿಕೆಯಿಂದ ಹೀಗಾಗಿದೆ. ಸದ್ಯ ಹಿಲೋರಿ ಆರಾಮ ಇದ್ದು, ಇಂದು ಸಂಜೆ ಆಸ್ಪತ್ರೆಯಿಂದ ಡಿಸ್ಚಾಜ್೯ ಆಗಲಿದ್ದಾರೆ ಎಂದು ಮೂಲಗಳು ಹೊಸ ದಿಗಂತಕ್ಕೆ ಖಚಿತಪಡಿಸಿವೆ.
ಇಲ್ಲಿನ ಡಿಸಿ ಕಚೇರಿ ಪಕ್ಕದ ಎಸ್ ಬಿಎಂ ಬ್ಯಾಂಕ್ ಎದುರು ಕಳೆದ ದಿ. 16ರಂದು ಇಬ್ಬರು ದುಷ್ಕರ್ಮಿಗಳು ಶೂಟೌಟ್ ಮಾಡಿ ಒಬ್ಬನ ಹತ್ಯೆ ಮಾಡಿದರೆ, ಇನ್ನೊಬ್ಬನಿಗೆ ಗಂಭೀರ ಗಾಯಗೊಳಿಸಿ 83 ಲಕ್ಷ ರೂ. ದೋಚಿ ಎಸ್ಕೇಪ್ ಆಗಿದ್ದಾರೆ. ಹಿಲೋರಿ ನೇತೃತ್ವದಲ್ಲಿ 8 ವಿಶೇಷ ತಂಡ ರಚಿಸಲಾಗಿದೆ. ಒಂದು ವಾರದಿಂದ ವಿವಿಧೆಡೆಗಳಲ್ಲಿ ಹಿಲೋರಿ ಸುತ್ತಾಡುತ್ತಿದ್ದಾರೆ. ದರೋಡೆಕೋರರ ಸುಳಿವು ಸಿಕ್ಕಿಲ್ಲ. ಸರ್ಕಾರ ಪ್ರಕರಣ ಬೇಗ ಭೇದಿಸಲು ಸೂಚಿಸಿದೆ. ಇದೇ ಒತ್ತಡದಿಂದ ಹಿಲೋರಿ ದಿಢೀರ್ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ ಎನ್ನಲಾಗಿದೆ.