ಹೊಸದಿಗಂತ ವರದಿ, ಕಲಬುರಗಿ:
ಕಲಬುರಗಿ ಮಹಾನಗರ ಪಾಲಿಕೆಯ 23ನೇ ಅವಧಿಗೆ ಮಹಾಪೌರರಾಗಿ ಆಯ್ಕೆಯಾಗಿದ್ದ ವರ್ಷಾ ರಾಜೀವ ಜಾನೆ ಮತ್ತು ಉಪ ಮಹಾಪೌರಾಗಿ ಆಯ್ಕೆಯಾಗಿದ್ದ ತೃಪ್ತಿ ಎಸ್.ಅಲ್ಲದ (ಲಾಖೆ) ಅವರು ಸೋಮವಾರ ಪಾಲಿಕೆಯ ತಮ್ಮ ಕೊಠಡಿಯಲ್ಲಿ ಅಧಿಕಾರ ವಹಿಸಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ನೂತನ ಮೇಯರ್, ಉಪ ಮೇಯರ್ ಅವರು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಕಲಬುರಗಿ ಸ್ಮಾರ್ಟ್ ಸಿಟಿ ಮಾಡುವ ಕನಸು ನನಸು ಮಾಡುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸಲಾಗುವುದು. ಕಲಬುರಗಿ ಉತ್ತರ ಮತ್ತು ದಕ್ಷಿಣದ ಶಾಸಕರು-ಸಚಿವರ ಜೊತೆಗೂಡಿ ನಗರವನ್ನು ಸ್ವಚ್ಛ ಕಲಬುರಗಿ ಮಾಡುವುದಾಗಿ ತಿಳಿಸಿದ ಅವರು, ಪಾಲಿಕೆಯ ಪ್ರತಿಯೊಂದು ಕಾರ್ಯಕ್ಕೆ ಮಹಾಜನತೆ ಸಹಕಾರ ನೀಡಬೇಕೆಂದರು.
ಕರ್ನಾಟಕ ರೇಷ್ಮೆ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರು ಮತ್ತು ಕಲಬುರಗಿ ಉತ್ತರ ಶಾಸಕಿ ಕನೀಜ್ ಫಾತಿಮಾ, ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಶಾಸಕ ಜಗದೇವ ಗುತ್ತೇದಾರ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಸೇರಿದಂತೆ ಪಾಲಿಕೆಯ ಸದಸ್ಯರು, ಅಧಿಕಾರಿ-ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.