ಮೊದಲ ಮಳೆಗೆ ಸಂಪೂರ್ಣ ಕೆಸರುಮಯವಾದ ಕಲ್ಲಡ್ಕ ರಸ್ತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ‌.ರೋಡು- ಅಡ್ಡಹೊಳೆ ವರೆಗಿನ ಚತುಪ್ಪಥ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು, ಭಾನುವಾರ ರಾತ್ರಿ ಸುರಿದ ಮೊದಲ ಮಳೆಗೆ ರಾ.ಹೆ.ಯ ಕಲ್ಲಡ್ಕದಲ್ಲಿ ರಸ್ತೆ ಸಂಪೂರ್ಣ ಕೆಸರುಮಯವಾಗುವ ಮೂಲಕ ಅವ್ಯವಸ್ಥೆ ಅನಾವರಣಗೊಂಡಿದೆ.

ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ ಕಲ್ಲಡ್ಕದಿಂದ ಮಾಣಿಯವರೆಗೆ ಮಳೆ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ವ್ಯವಸ್ಥೆ ಸಮರ್ಪಕವಾಗಿ ಇಲ್ಲದಿದ್ದರಿಂದ ರಸ್ತೆಯಿಡಿ ಕೆಸರುಮಯವಾಗಿ ಸಂಪೂರ್ಣ ಹದಗೆಟ್ಟ ಪರಿಣಾಮ ವಾಹನ ಸಂಚಾರಕ್ಕೆ ತೊಡುಕುಂಟಾಗಿದೆ.

ರಸ್ತೆಯುದ್ದಕ್ಕು ಅಲ್ಲಲ್ಲಿ ಬಿದ್ದಿರುವ ಗುಂಡಿಯಿಂದ ವಾಹನಗಳು ಸರಾಗವಾಗಿ ಚಲಿಸಲು ಸಾಧ್ಯವಾಗುತ್ತಿಲ್ಲ. ಸೋಮವಾರ ಬೆಳಿಗ್ಗೆಯಿಂದಲೇ ಮಾಣಿ, ಕುದ್ರೆಬೆಟ್ಟು, ನರಹರಿ ವರೆಗೂ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡಬೇಕಾಯಿತು.ಇದರಿಂದಾಗಿ ಜನಸಾಮಾನ್ಯರು ಕೂಡ ಹೈರಾಣರಾದರು. ಕಿರಿದಾದ ಸರ್ವೀಸ್ ರಸ್ತೆಯಲ್ಲಿ ಕೆಸರುನೀರೇ ತುಂಬಿಕೊಂಡ ಪರಿಣಾಮ ವಾಹನಗಳು ಸಂಚಾರಕ್ಕೆ ಪರದಾಟ ನಡೆಸುವ ದೃಶ್ಯಗಳು ಕಂಡುಬಂತು.

ಒಂದೇ ಮಳೆಗೆ ರಸ್ತೆಯ ಪರಿಸ್ಥಿತಿ ಈ ರೀತಿಯಾದರೆ ಮುಂದಿನ ಮಳೆಗಾಲದಲ್ಲಿ ಸಂಚಾರ ಮಾಡುವುದು ಸಾಧ್ಯನಾ? ಎಂಬ ಪ್ರಶ್ನೆ ಸಾರ್ವಜನಿಕರನ್ನು ಈಗಲೇ ಕಾಡಲಾರಂಭಿಸಿದೆ. ರಸ್ತೆಯಿಲ್ಲದ ಕಲ್ಲಡ್ಕ,ಮಾಣಿ ಭಾಗದಲ್ಲಿ ಕೆಸರು ಮಯವಾಗಿರುವ ಗದ್ದೆಯಲ್ಲಿ ವಾಹನ ಸಂಚಾರ ಮಾಡುವುದು ಅಪಾಯವನ್ನು ಆಹ್ವಾನಿಸಿದಂತಾಗಿದೆ. ಘನಗಾತ್ರದ ಯಂತ್ರದ ಮೂಲಕ ಕಾಮಗಾರಿ ನಡೆಸುವ ಸಂದರ್ಭದಲ್ಲಿ ಅಪ್ಪತಪ್ಪಿ ಸಾಮಾಗ್ರಿಗಳು ಬಿದ್ದರೂ ಮನುಷ್ಯನ ಜೀವಕ್ಕೆ ಅಪಾಯವಿದ್ದು, ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸಬೇಕಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!