July 6, 2026
Monday, July 6, 2026
spot_img

ಮೊಬೈಲ್‌ ಟಾರ್ಚ್‌ನಲ್ಲಿ ಬಸ್‌ ಓಡಿಸಿದವರಿಗೆ ಜಾಸ್ತಿ ಬೆಳಕು ಬರುವ ಫೋನ್‌ ಕೊಡಿಸಿ: ಸುರೇಶ್‌ ಕುಮಾರ್‌ ವ್ಯಂಗ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯ ರಸ್ತೆ ಸಾರಿಗೆ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿಯುವ ಘಟನೆಯೊಂದು ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್‌ ಹೆಡ್‌ಲೈಟ್ ಇಲ್ಲದೆಯೇ ರಾತ್ರಿ ವೇಳೆ ಸುಮಾರು 90 ಕಿಲೋಮೀಟರ್ ಸಂಚರಿಸಿದ್ದು, ಕಂಡಕ್ಟರ್ ಮೊಬೈಲ್ ಫೋನ್‌ನ ಟಾರ್ಚ್ ಆನ್ ಮಾಡಿ ಬೆಳಕು ನೀಡುತ್ತಿದ್ದರೆ, ಚಾಲಕ ಅದನ್ನೇ ನಂಬಿ ಬಸ್ ಚಲಾಯಿಸಿರುವ ಇದರ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಈ ಬಗ್ಗೆ ಬಿಜೆಪಿ ಶಾಸಕ ಎಸ್ ಸುರೇಶ್ ಕುಮಾರ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಇದು ಆಡಳಿತದ ಅವ್ಯವಸ್ಥೆ ಎಂದು ಕಿಡಿಕಾರಿದ್ದಾರೆ. ಸಾಮಾಜಿಕ ಮಾಧ್ಯಮ ಫೇಸ್​​ಬುಕ್​ನಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಆ ಚಾಲಕ ಮತ್ತು ಕಂಡಕ್ಟರ್ ಇಬ್ಬರಿಗೂ ಸಾರಿಗೆ ಸಚಿವರು ಹೆಚ್ಚು ಬೆಳಕು ನೀಡಬಲ್ಲ ಮೊಬೈಲ್ ಉಪಕರಣಗಳನ್ನು ನೀಡಿ ಸನ್ಮಾನ ಮಾಡಲಿ ಎಂದು ವ್ಯಂಗ್ಯವಾಡಿದ್ದಾರೆ.

ಕೆಲವು ವರ್ಷಗಳ ಹಿಂದೆ ನಮ್ಮ ರಾಜ್ಯದ ವಿಧಾನಸಭೆಯಲ್ಲಿ ಬಜೆಟ್ ಮಂಡಿಸಿದ ಅಂದಿನ ಹಣಕಾಸು ಸಚಿವರು, ವಿಧಾನಸಭೆಯ ಸಿಬ್ಬಂದಿ ಹಿಡಿದ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಬಜೆಟ್ ಭಾಷಣ ಓದಿದ್ದನ್ನು ಇಡೀ ರಾಜ್ಯ ಗಮನಿಸಿತ್ತು. ವಿಧಾನಸಭೆಯಲ್ಲಿಯೇ ಈ ಸ್ಥಿತಿ ಬಂದದ್ದಕ್ಕೆ ಎಲ್ಲರೂ ಮರುಗಿದ್ದರು. ಇದೀಗ ಆ ವಿದ್ಯಮಾನಕ್ಕೆ ಸವಾಲೆಸಿದಿರುವ ಘಟನೆ ಕಲಬುರಗಿಯಿಂದ ಬಂದಿದೆ ಎಂದಿದ್ದಾರೆ.

ಏನಿದು ಘಟನೆ?

ಕಾರ್‌ ಅಥವಾ ಬೈಕ್‌ನಲ್ಲಿ ಹೆಡ್‌ಲೈನ್‌ ಸಮಸ್ಯೆ ಆದರೆ ಹೋಗೋದನ್ನೇ ಕ್ಯಾನ್ಸಲ್‌ ಮಾಡಲಾಗುತ್ತದೆ. ಆದರೆ ಇಲ್ಲಿ ಪ್ರಯಾಣಿಕರ ಅಮೂಲ್ಯ ಜೀವಗಳನ್ನು ಹೊತ್ತ ಬಸ್‌ನಲ್ಲಿಯೇ ಮೊಬೈಲ್‌ ಟಾರ್ಚ್‌ ಬೆಳಕಿನಲ್ಲಿ ಗಾಡಿ ಓಡಿಸಲಾಗಿದೆ. ಈ ವಿಡಿಯೋ ವೈರಲ್‌ ಆಗಿದ್ದು, ಜನ ಗರಂ ಆಗಿದ್ದಾರೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಸೇರಿದ ಬಸ್‌ವೊಂದು ಕಲಬುರಗಿಯಿಂದ ಚಿಂಚೋಳಿ ಮಾರ್ಗವಾಗಿ ಹೊರಟಿತ್ತು, ಈ ವೇಳೆ ತಾಂತ್ರಿಕ ದೋಷಗಳಿಂದ ಹೆಡ್‌ಲೈಟ್‌ ಇಲ್ಲದಂತಾಗಿತ್ತು. ಆದರೆ ಕಂಡಕ್ಟರ್‌ ತಮ್ಮ ಫೋನ್‌ನ ಟಾರ್ಚ್‌ನಿಂದ ಬೆಳಕು ಬಿಟ್ಟಿದ್ದು, ಡ್ರೈವರ್‌ ಗಾಡಿ ಓಡಿಸಿದ್ದಾರೆ. ಸದ್ಯ ಅದೃಷ್ಟವಶಾತ್‌ ಯಾವುದೇ ಅನಾಹುತ ಸಂಭವಿಸಿಲ್ಲ.

ಕಲಬುರಗಿಯಿಂದ ಕಾಳಗಿವರೆಗೆ ಬಸ್​ನ ಹೆಡ್‌ಲೈಟ್ ಮಂದವಾಗಿದ್ದರೂ, ಇತರೆ ವಾಹನಗಳ ಬೆಳಕು ಹಾಗೂ ಬೀದಿ ದೀಪಗಳ ನೆರವಿನಿಂದ ಬಸ್ ಸಂಚರಿಸಿತು. ಆದರೆ ಕಾಳಗಿಯಿಂದ ಮುಂದೆ ಹೆಡ್‌ಲೈಟ್ ಬೆಳಕು ಇನ್ನಷ್ಟು ಮಂದವಾದ ಕಾರಣ, ರಸ್ತೆ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಟ್ರಾಫಿಕ್ ಹಾಗೂ ಬೀದಿ ದೀಪಗಳ ಬೆಳಕು ಕೂಡ ಇಲ್ಲದ ಪರಿಸ್ಥಿತಿಯಲ್ಲಿ, ಅನಿವಾರ್ಯವಾಗಿ ಕಂಡಕ್ಟರ್ ಮೊಬೈಲ್ ಟಾರ್ಚ್ ಬಳಸಬೇಕಾಯಿತು. ರಾತ್ರಿ 7.30ಕ್ಕೆ ಕಲಬುರಗಿಯಿಂದ ಹೊರಟ ಬಸ್ ತಡರಾತ್ರಿ ಚಿಂಚೋಳಿ ತಲುಪಿತು. ಬಸ್ಸಿನಲ್ಲಿ 8 ಜನ ಪ್ರಯಾಣಿಕರಿದ್ದರು ಎನ್ನಲಾಗಿದೆ. ಈ ಬಸ್ ಕಳೆದ ಮೂರು ದಿನಗಳಿಂದ ಇದೇ ಸ್ಥಿತಿಯಲ್ಲಿ ಓಡಿಸುತ್ತಿರುವುದು ಗೋಚರಿಸಿದೆ ಎಂದು ಪ್ರಯಾಣಿಕರು ದೂರಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !