ಸಿಂಧನೂರು-ಬೆಂಗಳೂರು ಮಧ್ಯೆ ‘ಕಲ್ಯಾಣ ರಥ’ ಐಷರಾಮಿ ಸ್ಲೀಪರ್ ಬಸ್ ಸೇವೆ: ಆ.28ರಂದು ಚಾಲನೆ

ಹೊಸ ದಿಗಂತ ವರದಿ, ಕಲಬುರಗಿ:

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯ ರಾಯಚೂರು ಜಿಲ್ಲೆಯ ಸಿಂಧನೂರು-ಬೆಂಗಳೂರು ನಡುವೆ ‘ಕಲ್ಯಾಣ ರಥ’ ಐಷರಾಮಿ ವೋಲ್ವೋ ಮಲ್ಟಿ ಎಕ್ಸಲ್ ಸ್ಲೀಪರ್ ಬಸ್ ಸೇವೆಗೆ ಆ. 28 ರಂದು ಸಿಂಧನೂರಿನಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಲಿದ್ದಾರೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ. ರಾಚಪ್ಪ ತಿಳಿಸಿದ್ದಾರೆ.

ಸಂಸ್ಥೆಗೆ ‘ಕಲ್ಯಾಣ ರಥ’ ಬ್ರ್ಯಾಂಡಿನ ವೋಲ್ವೋ ಮಲ್ಟಿ ಎಕ್ಸಲ್ ಸ್ಲೀಪರ್ ಬಸ್ ಹೊಸದಾಗಿ ಸೇರ್ಪಡೆಯಾಗಿದ್ದು, ರೈಲು ಸೇವೆ ಇಲ್ಲದ ಸಿಂಧನೂರಿನಿಂದ ಆರಂಭಿಕವಾಗಿ ಸೇವೆಗೆ ಇಳಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಸಿಂಧನೂರು-ಬೆಂಗಳೂರು ನಡುವಿನ ಈ ಐಷರಾಮಿ ಬಸ್ ಪ್ರತಿ ದಿನ ಸಿಂಧನೂರಿನಿಂದ ರಾತ್ರಿ 10 ಗಂಟೆಗೆ ಹೊರಟು ಕಾರಟಗಿ-ಗಂಗಾವತಿ- ಬೂದುಗುಂಪ ಕ್ರಾಸ್-ಹೊಸಪೇಟೆ- ಕೂಡ್ಲಿಗಿ-ಹಿರಿಯೂರು-ತುಮಕೂರು ಮಾರ್ಗವಾಗಿ ಮರುದಿನ ಬೆಂಗಳೂರಿಗೆ 5.30 ಗಂಟೆಗೆ ತಲುಪಲಿದೆ. ಅದೇ ರೀತಿ ಇದೇ ಮಾರ್ಗದಲ್ಲಿ ಬೆಂಗಳೂರಿನಿಂದ ರಾತ್ರಿ 10.15 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 5.45 ಗಂಟೆಗೆ ಸಿಂಧನೂರು ತಲುಪಲಿದೆ.

ಕಲ್ಯಾಣ ರಥದ ವಿಶೇಷತೆ:
“ಕಲ್ಯಾಣ ರಥ” ಬ್ಯಾಂಡಿನ ವೋಲ್ವೋ ಮಲ್ಟಿ ಎಕ್ಸಲ್ ಸ್ಲೀಪರ್ ಕ್ಲಾಸ್ 40 ಆಸನಗಳ ಈ ಐಷರಾಮಿ ಬಸ್ 350 ಬಿ.ಎಸ್-6 ಇಂಜಿನ್ ಹೊಂದಿದೆ. ಬಸ್ಸಿಗೆ ವಿಶಿಷ್ಟ ಸಸ್ಪೆನ್ಸನ್‍ಗಳನ್ನು ಅಳವಡಿಸಲಾಗಿದೆ. ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆ ಇದ್ದು, ಸ್ವಯಂ ಚಾಲಿತ ಬಾಗಿಲು ತೆರೆಯುವ ವ್ಯವಸ್ಥೆ, ಬೆಂಕಿ ನಂದಿಸುವ ಉಪಕರಣಗಳ ವ್ಯವಸ್ಥೆ, ವಾಹನದ ಟ್ರ್ಯಾಕಿಂಗ್ ಗುರುತು ವ್ಯವಸ್ಥೆ, ಮೋಬೈಲ್ ಚಾರ್ಜಿಂಗ್ ಪಾಯಿಂಟ್, ಬೆಡ್ ಲೈಟ್, ಲ್ಯಾಪ್ ಟಾಪ್ ಬ್ಯಾಗ್ ಇಡುವ ವ್ಯವಸ್ಥೆ ಇದೆ. ಒಟ್ಟಾರೆಯಾಗಿ ಆರಾಮದಾಯಕ ಮತ್ತು ಸುಖಕರ ಪ್ರಯಾಣಕ್ಕೆ ಹೇಳಿ ಮಾಡಿಸಿದಂತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!