ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳು ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾ ‘ಥಗ್ ಲೈಫ್’ ತೆರೆಕಂಡು 8 ದಿನಗಳಾದರೂ, ಚಿತ್ರವು ನಿರೀಕ್ಷಿತ ಯಶಸ್ಸು ಗಳಿಸುವಲ್ಲಿ ವಿಫಲವಾಗಿದೆ. ಮಣಿರತ್ನಂ ನಿರ್ದೇಶನ, ಕಮಲ್ ಹಾಸನ್ ನಿರ್ಮಾಣ ಹಾಗೂ ಅಭಿನಯದ ಈ ಮಲ್ಟಿಸ್ಟಾರ್ ಚಿತ್ರದಲ್ಲಿ ಸಿಂಬು, ತ್ರಿಶಾ, ನಾಸರ್ ಮತ್ತು ಅಭಿರಾಮಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ಟ್ರೇಲರ್, ಸಂಗೀತ ಮತ್ತು ಕಾಸ್ಟ್ ಲಿಸ್ಟ್ ಎಲ್ಲವೂ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಗಳನ್ನು ಹುಟ್ಟುಹಾಕಿದ್ದರೂ, ಚಿತ್ರ ಬಿಡುಗಡೆಯಾದ ನಂತರ ಕಥಾ ಹಿನ್ನಲೆ ಮತ್ತು ನಿರೂಪಣೆಯ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು.
ಬಿಡುಗಡೆಯಾದ ಮೊದಲ ದಿನವೇ ಚಿತ್ರವು ಸುಮಾರು 15.5 ಕೋಟಿ ಗಳಿಸಿ ಸೂಪರ್ ಆರಂಭ ಪಡೆದರೂ, ಎರಡನೇ ದಿನದಿಂದಲೇ ಕುಸಿತ ಆರಂಭವಾಯಿತು. ಎರಡನೇ ದಿನ 7 ಕೋಟಿ, ಮೂರನೇ ದಿನ 7.75 ಕೋಟಿ, ಭಾನುವಾರ 6.5 ಕೋಟಿ, ನಂತರ ವಾರದ ದಿನಗಳಲ್ಲಿ ಕ್ರಮವಾಗಿ 2.3 ಕೋಟಿ, 1.8 ಕೋಟಿ ಮತ್ತು 1.25 ಕೋಟಿ ಕಲೆಕ್ಷನ್ ಮಾಡಿದೆ.
200 ಕೋಟಿ ಬಜೆಟ್‌ನಲ್ಲಿ ತಯಾರಾಗಿದ್ದ ಈ ಮೆಗಾ ಮಲ್ಟಿಸ್ಟಾರ್ ಸಿನಿಮಾ, ಬಿಡುಗಡೆ ನಂತರವೂ 75 ಕೋಟಿ ಗಡಿ ದಾಟಲಾಗಿಲ್ಲ. ಒಟ್ಟು 8 ದಿನಗಳಲ್ಲಿ ಚಿತ್ರವು 42 ಕೋಟಿ ಯಷ್ಟೇ ಕಲೆಕ್ಷನ್ ಮಾಡಿರುವುದು ತಿಳಿದುಬಂದಿದೆ.
ಚಿತ್ರ ಬಿಡುಗಡೆಗೂ ಮುನ್ನವೇ ಭಾರೀ ಮೊತ್ತ ನೀಡಿ ಸ್ಟ್ರೀಮಿಂಗ್ ಹಕ್ಕುಗಳನ್ನು ಖರೀದಿಸಿದ್ದ ನೆಟ್‌ಫ್ಲಿಕ್ಸ್, ಚಿತ್ರ ಪ್ರದರ್ಶನದ ನಿರಾಶಾಜನಕ ಫಲಿತಾಂಶವನ್ನು ಕಂಡು ತನ್ನ ಒಪ್ಪಂದವನ್ನು ಪುನರ್ವಿಚಾರ ಮಾಡುವ ನಿರ್ಧಾರದಲ್ಲಿದೆ ಎಂಬ ಮಾತುಗಳು ಕೇಳಿಬಂದಿವೆ.