ಡಿಸಿಎಂ ಶಿಂಧೆ ವಿರುದ್ಧ ಹೇಳಿಕೆಗೆ ಕ್ಷಮೆಯಾಚಿಸಲ್ಲ ಎಂದ ಕಮ್ರಾ: ಮುಂಬೈ ಪೊಲೀಸರು ನೀಡಿದ್ರು ಸಮನ್ಸ್​!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರ ಡಿಸಿಎಂ ಏಕನಾಥ್‌ ಶಿಂಧೆ ಅವರ ಕುರಿತು ಸ್ಟಾಂಡ್​ ಅಪ್​ ಕಾಮಿಡಿ ಕಾರ್ಯಕ್ರಮದಲ್ಲಿ ಟೀಕೆ ಮಾಡಿರುವ ಟೀಕೆ ಮಾಡಿರುವ ಕಮೇಡಿಯನ್​ ಕುನಾಲ್ ಕಮ್ರಾ ತಾನು ಕ್ಷಮೆ ಯಾಚಿಸುವುದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ತಮ್ಮ ಹೇಳಿಕೆ ಕುರಿತು ಉದ್ಭವಿಸಿದ ವಿವಾದ, ಹೊಟೇಲ್ ಮೇಲಿನ ದಾಳಿ ಹಾಗು ಎಚ್ಚರಿಕೆಗೆ ನಾನು ಹೆದರುವುದಿಲ್ಲ. ನಾನು ಬಚ್ಚಿ ಕುಳಿತುಕೊಳ್ಳುವುದಿಲ್ಲ, ಸಾಯಲೂ ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.

ಇತ್ತ ಮುಂಬೈ ಪೊಲೀಸರು ಕಮ್ರಾಗೆ ಸಮನ್ಸ್​ ಜಾರಿ ಮಾಡಿದ್ದು, ಹೇಳಿಕೆ ದಾಖಲಿಸಲು ಹಾಜರಾಗುವಂತೆ ಸೂಚಿಸಿದ್ದಾರೆ.

ಮೂಲಗಳ ಪ್ರಕಾರ, ಖಾರ್ ಪೊಲೀಸ್ ಠಾಣೆಯಿಂದ ಕಮ್ರಾ ವಾಸಿಸುವ ನಿವಾಸದ ವಿಳಾಸಕ್ಕೆ ಸಮನ್ಸ್​ ನೀಡಲಾಗಿದೆ. ಆದರೆ ಸದ್ಯ ಕಮ್ರಾ ಮುಂಬೈನಲ್ಲಿ ಇಲ್ಲದ ಕಾರಣ ಅವರ ವಾಟ್ಸ್‌ಆ್ಯಪ್​ಗೆ ಸಮನ್ಸ್​ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್​ ಮಾಡಿರುವ ಕಮ್ರಾ , ಮನರಂಜನಾ ಕಾರ್ಯಕ್ರಮ ನಡೆಯುವ ಸ್ಥಳ ಕೇವಲ ಒಂದು ವೇದಿಕೆ. ಅಲ್ಲಿ ಎಲ್ಲಾ ರೀತಿಯ ಕಾರ್ಯಕ್ರಮಗಳ ಪ್ರದರ್ಶನವಾಗುತ್ತದೆ. ನನ್ನ ಕಾಮಿಡಿ ಕಾರ್ಯಕ್ರಮಕ್ಕೂ ಆ ವೇದಿಕೆಗೂ ಯಾವುದೇ ಸಂಬಂಧವಿಲ್ಲ. ನಾನು ಏನು ಹೇಳುತ್ತೇನೆ ಎಂಬುದನ್ನು ನಿಯಂತ್ರಿಸುವ ಶಕ್ತಿ ಯಾರಿಗೂ ಇಲ್ಲ. ಯಾವುದೇ ರಾಜಕೀಯ ಪಕ್ಷಕ್ಕೂ ಇಲ್ಲ ಎಂದಿದ್ದಾರೆ.

ಎಲ್ಲರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ. ಸಾರ್ವಜನಿಕ ಶಕ್ತಿಶಾಲಿಯುತ ವ್ಯಕ್ತಿಯನ್ನು ತಮಾಷೆ ಮಾಡಿದ ಮಾತ್ರಕ್ಕೆ ಈ ಸ್ವಾತಂತ್ರ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ. ನನಗೆ ತಿಳಿದಿರುವ ಮಟ್ಟಿಗೆ ನಮ್ಮ ನಾಯಕರು ಮತ್ತು ನಮ್ಮ ರಾಜಕೀಯ ವ್ಯವಸ್ಥೆಯನ್ನು ಗೇಲಿ ಮಾಡುವುದು ಕಾನೂನಿಗೆ ವಿರುದ್ಧವಲ್ಲ. ನಾನು ಕಾನೂನಾತ್ಮಕವಾಗಿ ಪೊಲೀಸರು ಮತ್ತು ನ್ಯಾಯಾಲಯದೊಂದಿಗೆ ಸಹಕರಿಸುತ್ತೇನೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!