ಹೆಣ್ಣಿಗೆ ಸೀರೆ ಯಾಕೆ ಅಂದ…….. ಆ ಅಂದ ಚಂದ…… ಈ ಹಾಡು ನೀವು ಕೇಳಿಯೇ ಇರ್ತೀರ ಅಲ್ವಾ? ಈ ಸೀರೆ ಅನ್ನೋದು ಮಹಿಳೆಯರ ಎಮೋಷನ್ ಅಂತಾನೆ ಹೇಳ್ಬಹುದು. ಅದರಲ್ಲೂ ಕಾಂಜೀವರಂ ರೇಷ್ಮೆ ಸೀರೆಗಳು ಭಾರತದ ಸಾಂಸ್ಕೃತಿಕ ಪರಂಪರೆಯಿಂದ ಬಂದಿವೆ. ಶ್ರೀಮಂತ ಜರಿ ಕೆಲಸ, ಗಾಢ ಬಣ್ಣಗಳು ಮತ್ತು ಕಲಾತ್ಮಕ ಬುಟ್ಟಾಗಳಲ್ಲಿ ಕಾಣುವ ಈ ಸೀರೆ, ತಾಯಿ-ಮಗಳ ಹಿರಿಮೆಗೆ ತಕ್ಕಂತೆ ಮನೆಮಾಡಿಕೊಂಡಿದೆ. ಆದರೆ, ಈ ಸೀರೆಗಳ ಬೇಡಿಕೆ ಹೆಚ್ಚಾದಂತೆ ಮಾರುಕಟ್ಟೆಯಲ್ಲಿ ನಕಲಿ ಸೀರೆಗಳ ಹರಿವೂ ಕೂಡ ಜೋರಾಗಿದೆ.
ನಕಲಿ ಕಾಂಜೀವರಂ ಸೀರೆಗಳನ್ನು ಶುದ್ಧ ರೇಷ್ಮೆಯಂತೆ ತೋರಿಸುವ ಪ್ರಯತ್ನಗಳು ಖರೀದಿದಾರರಿಗೆ ಸವಾಲಾಗಿ ಪರಿಣಮಿಸುತ್ತಿವೆ. ಈ ಸನ್ನಿವೇಶದಲ್ಲಿ, ನಿಜವಾದ ಕಾಂಚಿಪುರಂ ಸೀರೆ ಗುರುತಿಸಲು ಕೆಲವು ಪ್ರಮುಖ ಅಂಶಗಳನ್ನು ಗಮನದಲ್ಲಿ ಇಡಬೇಕಾಗಿದೆ.
ಬಟ್ಟೆಯ ಗುಣಮಟ್ಟ ವೀಕ್ಷಿಸಿ: ನಿಜವಾದ ರೇಷ್ಮೆ ಸೀರೆ ಮೃದುವಾಗಿದ್ದರೂ ಕೂಡ ಭಾರವಾಗಿರುತ್ತದೆ. ಕೈಮಗ್ಗದ ಸ್ವರೂಪದಲ್ಲಿ ಸ್ವಲ್ಪ ನೂಲುಗಳ ಹೊಂದಾಣಿಕೆಯಲ್ಲಿ ಮೇಲೆ ಕೆಳಗೆ ಆಗಬಹುದು. ಆದರೆ ನಿಜವಾದ ಕಾಂಜೀವರಂ ಸೀರೆ ಹಗುರವಾಗಿದ್ದರೆ ಅದು ಅರೆ-ರೇಷ್ಮೆ ಅಥವಾ ಸಂಶ್ಲೇಷಿತ ಉಡುಪುಗಳಾಗಿರಬಹುದು.
ಬಾರ್ಡರ್ ಮತ್ತು ಪಲ್ಲು ವಿಭಿನ್ನವಾಗಿರುತ್ತವೆ: ಅಧಿಕೃತ ಕಾಂಜೀವರಂ ಸೀರೆಗಳಲ್ಲಿ ಬಾರ್ಡರ್ ಮತ್ತು ಪಲ್ಲುಗಳು ಸೀರೆಗೆ ಹೋಲಿಕೆಯಾಗದೆ ವಿಭಿನ್ನವಾಗಿ ಇರುತ್ತವೆ. ಮೋಟಿಫ್‌ಗಳು ನೇರವಾಗಿ ನೇಯಲ್ಪಟ್ಟಿರುತ್ತವೆ, ಮುದ್ರಿತವಾಗಿರಬಾರದು.
ಲೇಬಲ್ ಪರಿಶೀಲನೆ ಅಗತ್ಯ: ಶುದ್ಧ ಕಾಂಜೀವರಂ ಸೀರೆಗಳು ‘ಸಿಲ್ಕ್ ಮಾರ್ಕ್’ ಅಥವಾ ‘pure Kanchipuram silk’ ಎಂಬ ಲೇಬಲ್‌ನೊಂದಿಗೆ ಬರುತ್ತವೆ. ಸರ್ಕಾರದಿಂದ ಮಾನ್ಯತೆ ಪಡೆದ ಪ್ರಮಾಣಿತ ಟ್ಯಾಗ್ ಇದಕ್ಕಿರಬೇಕು.
ಜರಿಯ ಗುಣಮಟ್ಟ ಪರೀಕ್ಷಿಸಿ: ಬೆರಳ ಉಗುರುಗಳಿಂದ ಜರಿಯನ್ನು ಕೆರೆದಾಗ ಅದು ಸುಲಿದರೆ ಅಥವಾ ಉದುರಿದರೆ ಅದು ನಕಲಿ ಇರಬಹುದು ಎಚ್ಚರಿಕೆ. ನಿಜವಾದ ಜರಿ ಬಟ್ಟೆಯೊಳಗೆ ಆಳವಾಗಿ ನೇಯಲ್ಪಟ್ಟಿರುತ್ತದೆ.
ತೂಕವು ಶ್ರೇಣಿಯ ಸೂಚಕ: ಪ್ರಾಮಾಣಿಕ ಕಾಂಜೀವರಂ ಸೀರೆ 500ರಿಂದ 800 ಗ್ರಾಂ ತೂಗುತ್ತದೆ. ಇದರಿಗಿಂತ ಬಹಳ ಕಡಿಮೆ ತೂಕವಿದ್ದರೆ ಅದು ನಕಲಿ ಅಥವಾ ಅರೆ-ರೇಷ್ಮೆ ಉಪಯೋಗಿಸಿರುವುದರ ಸೂಚನೆ.