ಹೊಸದಿಗಂತ ಡಿಜಿಟಲ್ ಡೆಸ್ಕ್:
ಏ ಬುಜಂಗ… ಬಾರಾ, ಒಂದು ಉಗ್ರ ಹೋರಾಟ ಉಂಟು…
ಈ ಡೈಲಾಗ್ ಕೇಳದವರು ಯಾರು? ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದ ಮೂಲಕ ಮನೆಮಾತಾಗಿದ್ದ ನಟ ರಿಷಬ್ ಶೆಟ್ಟಿ, ಕನ್ನಡ ಶಾಲೆ ಉಳಿಸುವ ಕಾರ್ಯವನ್ನು ಕೇವಲ ರೀಲ್‌ನಲ್ಲಿ ಮಾತ್ರವಲ್ಲದೆ ರಿಯಲ್‌ನಲ್ಲೂ ಮಾಡಿ ತೋರಿಸಿದ್ದಾರೆ!
ರಿಷಬ್ ಈಗ ತಾವು ಓದಿದ್ದ ಕೆರಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಪಡೆದುಕೊಂಡಿದ್ದಾರೆ.
ಭಾನುವಾರ ನಡೆದ ಶಾಲಾ ಎಸ್‌ಡಿಎಂಸಿ ಸಭೆಯಲ್ಲಿ ರಿಷಬ್ ಶಾಲೆಯನ್ನು ದತ್ತು ತೆಗೆದುಕೊಳ್ಳುವ ತನ್ನ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಮೂವತ್ತು ವರ್ಷಗಳ ಹಿಂದೆ ಈ ಶಾಲೆಯಲ್ಲಿ 400ರಷ್ಟು ಮಕ್ಕಳಿದ್ದರು. ಈಗ ಅದು 71ಕ್ಕೆ ಇಳಿಕೆಯಾಗಿದೆ. ಒಬ್ಬರು ಖಾಯಂ ಶಿಕ್ಷಕರು, ಉಳಿದವರು ಗೌರವ ಶಿಕ್ಷಕರು. ಖುದ್ದಾಗಿ ಈ ಶಾಲೆಯ ಸ್ಥಿತಿಗತಿ ತಿಳಿದುಕೊಂಡಿದ್ದೇನೆ. ಮುಂದಿನ ಶೈಕ್ಷಣಿಕ ವರ್ಷದಿಂದ ಐದು ವರ್ಷಗಳ ಅವಧಿಗೆ ರಿಷಬ್ ಫೌಂಡೇಶನ್ ಈ ಶಾಲೆಯನ್ನು ದತ್ತು ಪಡೆದಿದೆ ಎಂದು ಅವರು ಹೇಳಿದ್ದಾರೆ.
ಮೂಲಭೂತ ಸೌಕರ್ಯ, ಕೊಠಡಿ, ಶಿಕ್ಷಕರು, ಆವರಣ ಗೋಡೆ, ಅಗತ್ಯವಿದ್ದರೆ ವಾಹನದ ವ್ಯವಸ್ಥೆಯನ್ನು ಇಲ್ಲಿಗೆ ಕಲ್ಪಿಸಲಾಗುವುದು. ಎಲ್‌ಕೆಜಿ, ಯುಕೆಜಿ, ಸ್ಪೋಕನ್ ಇಂಗ್ಲಿಷ್ ಕಲಿಕೆ ಆರಂಭಿಸುವ ಯೋಜನೆ ಕೂಡಾ ಇದೆ ಎಂದು ರಿಷಬ್ ಹೇಳಿದ್ದಾರೆ.