ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ʼಕನ್ನಡ್ ಗೊತ್ತಿಲ್ಲʼ ಎಂದು ಹೇಳುವವರ ಸಂಖ್ಯೆ ಹೆಚ್ಚಾಗಿದೆ. ಎಷ್ಟೋ ಮಂದಿ ನಾನ್ ಕನ್ನಡಿಗರಿಗೆ ಕನ್ನಡ ಕಲಿಯೋ ಆಸಕ್ತಿ ಇಲ್ಲ, ಬೆಂಗಳೂರಿಗರಿಗೆ ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ತಮಿಳು ಎಲ್ಲವೂ ಬರುತ್ತದೆ ಎಂದು ಅಂದುಕೊಳ್ತಾರೆ. ನಾವು ನಮ್ಮ ಭಾಷೆಯಲ್ಲಿ ಮಾತನಾಡಿದರೆ ಸಾಕು ಅವರೇ ನಮಗೆ ಅಡ್ಜಸ್ಟ್ ಆಗ್ತಾರೆ ಎನ್ನುವ ಮೈಂಡ್‌ಸೆಟ್ ಇದೆ. ಇಂಥವರನ್ನು ಬದಲಾಯಿಸೋಕೆ ಆಗೋದಿಲ್ಲ.
ಇನ್ನು ಹಲವು ನಾನ್ ಕನ್ನಡಿಗರು ಕನ್ನಡ ಬರದೇ ಹೋದ್ರೂ ಪ್ರಯತ್ನ ಮಾಡ್ತಾರೆ. ಬೇಕು, ಬೇಡ, ಎಷ್ಟು, ಊಟ ಆಯ್ತಾ ಈ ರೀತಿ ಸಿಂಪಲ್ ಪದಗಳನ್ನು ಕಲಿತು ಪ್ರಯೋಗ ಮಾಡೋಕೆ ಆರಂಭಿಸ್ತಾರೆ. ಇಂಥ ನಾನ್ ಕನ್ನಡಿಗರಿಗೆ ಇನ್ನಷ್ಟು ಕನ್ನಡ ಕಲಿಯಲು ಪ್ರೇರಣೆ ನೀಡಲಾಗುತ್ತಿದೆ.
“ಕನ್ನಡ ಮಾತನಾಡುವ ಬಾಯಿಗೆ ಮಿಠಾಯಿ” ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಪ್ರೋ, ಕೃಷ್ಣೇಗೌಡ, ಸಂಗೀತ ನಿರ್ದೇಶಕ ಹಂಸಲೇಖ ಚಾಲನೆ ನೀಡಿದರು.
ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕನ್ನಡ ಮಾತನಾಡುವವರ ಸಂಖ್ಯೆ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ, ಸ್ಪಂದನ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆಯಿಂದ ಕುರಬರಹಳ್ಳಿಯ ಕಾವೇರಿ ಬಸ್ ಸ್ಟ್ಯಾಂಡ್ ಸೇರಿದಂತೆ ನಗರದ 20ಕ್ಕೂ ಹೆಚ್ಚು ಕಡೆಗಳಲ್ಲಿ ವಿಭಿನ್ನವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಕನ್ನಡ ಮಾತಾಡುವ ಬಾಯಿಗೆ ಮಿಠಾಯಿ ಎಂದು ಹೆಸರಿಡಲಾಗಿತ್ತು.
ಕನ್ನಡ ಬಾರದವರ ಕೈಗೆ ಕನ್ನಡ ಕಲಿಸುವ ಪುಸ್ತಕ ನೀಡಿ ಕನ್ನಡ ಕಲಿಸಲು ಪ್ರೋ ಕೃಷ್ಣೇಗೌಡ ಮುಂದಾದರು. ಕಾರ್ಯಕ್ರಮದಲ್ಲಿ ನಿರ್ದೇಶಕ ಎಸ್. ನಾರಾಯಣ್, ಮಾಜಿ ಸಚಿವ ರೇವಣ್ಣ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು. ಈ ವೇಳೆ ಕನ್ನಡ ಮಾತಾಡಿದ ಕನ್ನಡಿಗರ ಬಾಯಿಗೆ ಮಿಠಾಯಿ, ಕನ್ನಡ ಬಾರದವರ ಕೈಗೆ ಕನ್ನಡ ಪುಸ್ತಕ ನೀಡಲಾಯಿತು.ಕಾರ್ಯಕ್ರಮದಲ್ಲಿ ಕನ್ನಡ ಬಾರದ ಬೇರೆ ಭಾಷೆಯವರಿಗೆ ಮೂವತ್ತು ದಿನದಲ್ಲಿ ಕನ್ನಡ ಕಲಿಯುವ ಕನ್ನಡ ಟು ಇಂಗ್ಲಿಷ್, ಹಿಂದಿ, ತೆಲುಗು, ತಮಿಳು, ಮಲೆಯಾಳಂ ಹೀಗೆ ನಾಲ್ಕೈದು ಭಾಷೆಯವರು ಕನ್ನಡ ಕಲಿಯಲು ಸಹಾಯ ಆಗುವಂತಹ ಪುಸ್ತಕ ನೀಡಿ ಪ್ರೋತ್ಸಾಹಿಸಲಾಯಿತು.