ಹೊಸದಿಗಂತ ಡಿಜಿಟಲ್ ಡೆಸ್ಕ್:
ಹವಾಮಾನ ವೈಪರೀತ್ಯದಿಂದ ಪವಿತ್ರ ಅಮರನಾಥ ಯಾತ್ರೆಗೆ ತೆರಳಿದವರು ಸಂಕಷ್ಟಕ್ಕೆ ಸಿಲುಕಿದ್ದು, ಇದ್ರಲ್ಲಿ ಕರ್ನಾಟಕದವರು ಕೂಡ ಜೊತೆಯಿದ್ದಾರೆ .
ಈ ಹಿನ್ನೆಲೆ ಕನ್ನಡಿಗರ ರಕ್ಷಣೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತುರ್ತಾಗಿ ಸ್ಪಂದಿಸಿದ್ದು, ಅಮರನಾಥದಲ್ಲಿ ಸಂಕಷ್ಟದಲ್ಲಿರುವ ಕರ್ನಾಟಕದ ಎಲ್ಲರೂ ಸುರಕ್ಷಿತವಾಗಿ ಮರಳಲು ಎಲ್ಲ ಅಗತ್ಯ ನೆರವನ್ನು ನೀಡುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ.
ಅಮರನಾಥ ಮಾರ್ಗದ ಮಧ್ಯದಲ್ಲಿ ಗುಡ್ಡ ಕುಸಿದು ಗದಗದ 23 ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗದಗ ಜಿಲ್ಲೆಯಿಂದ ನಾಲ್ಕು ದಿನಗಳ ಹಿಂದೆ ಅಮರನಾಥಕ್ಕೆ ತೆರಳಿದ್ದ ಇವರು ಅಲ್ಲಿನ ಭಾರಿ ಮಳೆಯಿಂದಾಗಿ ತೀವ್ರ ತೊಂದರೆಗೆ ಸಿಲುಕಿದ್ದು, ಅಲ್ಲಿನ ಪಂಚತರಣಿ ಕ್ಯಾಂಪ್ನಲ್ಲಿ ತಾತ್ಕಾಲಿಕ ಆಶ್ರಯ ಪಡೆದಿದ್ದಾರೆ.
ಗದಗದಿಂದ ತೆರಳಿರುವ 23 ಮಂದಿ ಮಾತ್ರವಲ್ಲದೆ ಕರ್ನಾಟಕದ ಒಟ್ಟು 80 ಮಂದಿ ಅಮರನಾಥ ಮಂದಿರದಿಂದ ಆರು ಕಿ.ಮೀ. ದೂರದಲ್ಲಿರುವ ಪಂಚತರಣಿ ಟೆಂಟ್ನಲ್ಲಿ ಆಶ್ರಯ ಪಡೆದಿದ್ದು, ತೀವ್ರ ಆತಂಕದಲ್ಲಿದ್ದಾರೆ. ಈ ಕುರಿತು ಮಾಹಿತಿ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಗತ್ಯ ರಕ್ಷಣಾ ಕಾರ್ಯ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.