ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂತಾರ (Kantara) ಚಾಪ್ಟರ್ 1 ಸಿನಿಮಾದ ಟೀಸರ್ (Teaser) ರಿಲೀಸ್ ಆಗಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದು, ಉತ್ತಮ ಸ್ಪಂದನೆ ಸಿಗುತ್ತಿದೆ.
ಇತ್ತ ಟೀಸರ್ ನಲ್ಲಿ ತೋರಿಸಲಾದ ಆಶಯ ಮತ್ತು ರಿಷಬ್ ಶೆಟ್ಟಿ ಕಂಡು ದಕ್ಷಿಣದ ಬಹುತೇಕ ಸ್ಟಾರ್ ನಟರು ಫಿದಾ ಆಗಿದ್ದು, ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ಅನೇಕ ಕಲಾವಿದರು ಮೆಚ್ಚಿ ಶುಭ ಹಾರೈಸಿದ್ದಾರೆ.
ಕಳೆದ ವರ್ಷ ಬಿಡುಗಡೆಯಾಗಿ ಜಗತ್ತಿನಾದ್ಯಂತ ಮೆಚ್ಚುಗೆ ಪಡೆದ ‘ಕಾಂತಾರ’ ಚಿತ್ರವನ್ನು ನಿರ್ಮಿಸಿದ್ದ ಹೊಂಬಾಳೆ ಫಿಲಂಸ್, ಈಗ ಇನ್ನೊಂದು ಅಂಥದ್ದೇ ಪ್ರಯತ್ನದೊಂದಿಗೆ ವಾಪಸಾಗುತ್ತಿದೆ. ‘ಕಾಂತಾರ – ಅಧ್ಯಾಯ 1’ ರ (Kantara Chapter 1) ಮೊದಲ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನರ ವೀಕ್ಷಣೆಗೆ ಸಾಕ್ಷಿಯಾಗಿತ್ತು.
ಮೊದಲ ಭಾಗದ ಯಶಸ್ಸಿಗೆ ಕಾರಣವಾಗಿದ್ದ ಮತ್ತು ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿರುವ ಸಂಗೀತವು ಈ ಟೀಸರ್ ಮೂಲಕ ವಾಪಸ್ಸಾಗಿದೆ. ಈ ಟೀಸರ್ ನ ವೈಷಿಷ್ಟ್ಯವೆಂದರೆ, ಚಿತ್ರವು ಏಳು ಭಾಷೆಗಳಲ್ಲಿ ಮೂಡಿಬರುತ್ತಿದ್ದು, ಪ್ರತಿಯೊಂದು ಭಾಷೆಯ ಟೀಸರ್ ಒಂದೊಂದು ರಾಗದ ಮೂಲಕ ಅಂತ್ಯವಾಗಲಿದೆ.
‘ಕಾಂತಾರ’ ಚಿತ್ರವು ಕಳೆದ ವರ್ಷ ಜಗತ್ತಿನಾದ್ಯಂತ ಬಿಡುಗಡೆಯಾಗಿ ಅತ್ಯಂತ ಯಶಸ್ವಿಯಾಗಿತ್ತು. ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಬಂಧವನ್ನು, ಜನಪದ ಅಂಶಗಳನ್ನು ಬೆರೆಸಿ ಹೇಳಿದ ರೀತಿ ಪ್ರೇಕ್ಷಕರನ್ನು ಆಕರ್ಷಿಸಿತ್ತು. ಪ್ರತಿ ಕಥೆಯನ್ನೂ ವಿಶಿಷ್ಟ ರೀತಿಯಲ್ಲಿ ಕಟ್ಟಿಕೊಡಬೇಕು ಎಂಬ ಹೊಂಬಾಳೆ ಫಿಲಂಸ್ ನ ಬದ್ಧತೆ ‘ಕಾಂತಾರ – ಅಧ್ಯಾಯ 1’ ರಲ್ಲೂ ಮುಂದುವರೆದಿದ್ದು, ದೈವತ್ವದ ಹೊಸ ವ್ಯಾಖ್ಯಾನ ಈ ಚಿತ್ರದಲ್ಲಾಗಲಿದೆ.