ಹೊಸದಿಗಂತ ಡಿಜಿಟಲ್ ಡೆಸ್ಕ್:
ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆಯಾಗಿ 12 ದಿನಗಳಾದರೂ ಕಲೆಕ್ಷನ್‌ನಲ್ಲಿ ಯಾವುದೇ ಕುಸಿತ ಕಂಡಿಲ್ಲ. ವಾರದ ದಿನಗಳಲ್ಲಿಯೂ ಈ ಸಿನಿಮಾ ಭರ್ಜರಿ ಗಳಿಕೆ ದಾಖಲಿಸುತ್ತಿದ್ದು, ಸಾವಿರ ಕೋಟಿ ರೂಪಾಯಿ ಕ್ಲಬ್‌ಗೆ ಸೇರುವ ಮುನ್ಸೂಚನೆ ನೀಡಿದೆ. ದೀಪಾವಳಿ ಹಬ್ಬದ ರಜಾದಲ್ಲಿ ಕೂಡ ಈ ಸಿನಿಮಾ ಹೆಚ್ಚು ಕಲೆಕ್ಷನ್ ಮಾಡುವ ಸಾಧ್ಯತೆ ಇದೆ.
ಅಕ್ಟೋಬರ್ 2ರಂದು ಬಿಡುಗಡೆಯಾದ ಈ ಸಿನಿಮಾ ಪ್ರಾರಂಭದ ದಿನದಿಂದಲೇ ಭಾರಿ ಜನಪ್ರಿಯತೆಯನ್ನು ಗಳಿಸಿದೆ. ವರದಿಗಳ ಪ್ರಕಾರ, 11 ದಿನಗಳಲ್ಲಿ ‘ಕಾಂತಾರ: ಚಾಪ್ಟರ್ 1’ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 655 ಕೋಟಿ ರೂಪಾಯಿ ಗಳಿಸಿದೆ. 12ನೇ ದಿನದ ಕಲೆಕ್ಷನ್ ಸೇರಿದರೆ ಒಟ್ಟು ಮೊತ್ತವು 700 ಕೋಟಿ ರೂಪಾಯಿಯತ್ತ ಮುನ್ನಡೆದಿದೆ. ಭಾರತದಲ್ಲೇ ಈ ಚಿತ್ರ 438 ಕೋಟಿ ರೂಪಾಯಿ ಗಳಿಸಿದ್ದು, ಅದರಲ್ಲಿ ಕನ್ನಡ ಆವೃತ್ತಿಯಿಂದ 138 ಕೋಟಿ ರೂಪಾಯಿ ಮತ್ತು ಹಿಂದಿ ಆವೃತ್ತಿಯಿಂದ 144.5 ಕೋಟಿ ರೂಪಾಯಿ ಸಂಗ್ರಹವಾಗಿದೆ.
ಎರಡನೇ ವಾರದಲ್ಲಿಯೂ ಈ ಚಿತ್ರ ಕಲೆಕ್ಷನ್‌ನಲ್ಲಿ ಯಾವುದೇ ಕುಸಿತ ಕಂಡಿಲ್ಲ. ವಿಶೇಷವಾಗಿ ಎರಡನೇ ಸೋಮವಾರದಂದು 19 ಕೋಟಿ ರೂಪಾಯಿ ಗಳಿಕೆ ದಾಖಲಿಸಿರುವುದು ಕನ್ನಡ ಚಿತ್ರರಂಗದ ಹೆಮ್ಮೆಯ ವಿಷಯವಾಗಿದೆ. ಸಾಮಾನ್ಯವಾಗಿ ವಾರದ ಮಧ್ಯದಲ್ಲಿ ಸಿನಿಮಾ ಕಲೆಕ್ಷನ್ ಇಳಿಯುವ ಸಂದರ್ಭದಲ್ಲಿಯೇ ‘ಕಾಂತಾರ: ಚಾಪ್ಟರ್ 1’ ಸ್ಥಿರ ಪ್ರದರ್ಶನ ನೀಡಿರುವುದು ಗಮನಾರ್ಹವಾಗಿದೆ.
‘ಕಾಂತಾರ: ಚಾಪ್ಟರ್ 1’ ಕನ್ನಡ ಸಿನೆಮಾದ ಬಾಕ್ಸ್ ಆಫೀಸ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಚಿತ್ರವಾಗಿದ್ದು, ಶೀಘ್ರದಲ್ಲೇ 700 ಕೋಟಿಯ ಗಡಿ ದಾಟುವ ಸಾಧ್ಯತೆಯಿದೆ. ಈ ಯಶಸ್ಸು ಕನ್ನಡ ಚಿತ್ರರಂಗಕ್ಕೆ ಹೊಸ ಹೆಜ್ಜೆ ಗುರುತು ಮೂಡಿಸಿರುವಂತಾಗಿದೆ.