ಕಾರ್ಗಿಲ್ ವಿಜಯ್ ದಿವಸ್ 2023: ಈ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯಿರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಭಾರತದಲ್ಲಿ ಪ್ರತಿವರ್ಷ ಜುಲೈ 26 ಅನ್ನು ಕಾರ್ಗಿಲ್‌ ವಿಜಯ್‌ ದಿವಸ್‌ ಎಂದು ಆಚರಿಸಲಾಗುತ್ತದೆ. ಇಂದು 1999ರ ಕಾರ್ಗಿಲ್‌ ಯುದ್ಧದಲ್ಲಿ ವೀರಮರಣ ಹೊಂದಿದ ಸೈನಿಕರ ತ್ಯಾಗ, ಬಲಿದಾನವನ್ನು ಸ್ಮರಿಸಲಾಗುತ್ತದೆ. ಕಾರ್ಗಿಲ್ ವಿಜಯ್ ದಿವಸ್ ನ ಇತಿಹಾಸ ಮತ್ತು ಮಹತ್ವಗಳ ಬಗ್ಗೆ ಇಲ್ಲಿ ತಿಳಿಯೋಣ.

ಇತಿಹಾಸ ಮತ್ತು ಮಹತ್ವ

1971ರ ಇಂಡೋ-ಪಾಕ್ ಯುದ್ಧದ ನಂತರ ಹಲವಾರು ಮಿಲಿಟರಿ ಒಪ್ಪಂದಗಳು ನಡೆದರೂ 1998ರಲ್ಲಿ ಎರಡೂ ರಾಷ್ಟ್ರಗಳು ಪರಮಾಣು ಪರೀಕ್ಷೆಗಳನ್ನು ನಡೆಸಿದವು. 1990ರ ದಶಕದಲ್ಲಿ ಕಾಶ್ಮೀರದಲ್ಲಿ ಉಗ್ರಗಾಮಿ ಚಟುವಟಿಕೆಗಳಿಂದಾಗಿ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಯಿತು. ಈ ಸಮಸ್ಯೆಯನ್ನು ಪರಿಹರಿಸಲು ಭಾರತ ಮತ್ತು ಪಾಕಿಸ್ತಾನವು ಫೆಬ್ರವರಿ 1999ರಲ್ಲಿ ಲಾಹೋರ್ ಘೋಷಣೆಗೆ ಸಹಿ ಹಾಕಿದವು. ಆ ಮೂಲಕ ಕಾಶ್ಮೀರ ಸಮಸ್ಯೆಗೆ ಶಾಂತಿಯುತ ಪರಿಹಾರವನ್ನು ಭರವಸೆ ನೀಡಲಾಯಿತು. ಅದಾದ ಬಳಿಕವೂ ಪಾಕಿಸ್ತಾನ ತನ್ನ ಸೇನೆಯನ್ನು ರಹಸ್ಯವಾಗಿ ಭಾರತದ ಗಡಿ ನಿಯಂತ್ರಣ ರೇಖೆಗೆ ಕಳುಹಿಸಿತು.

ಆರಂಭದಲ್ಲಿ ಪಾಕಿಸ್ತಾನ ಸೇನೆಯು ಯುದ್ಧದಲ್ಲಿ ತಮ್ಮ ಪಾಲ್ಗೊಳ್ಳುವಿಕೆಯನ್ನು ಒಪ್ಪಿಕೊಳ್ಳಲಿಲ್ಲ ಮತ್ತು ಆಕ್ರಮಣಕ್ಕೆ ಕಾಶ್ಮೀರಿ ಉಗ್ರಗಾಮಿಗಳನ್ನು ದೂಷಿಸಿತು. ಆಗಿನ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಮತ್ತು ಪಾಕಿಸ್ತಾನದ ಸೇನಾ ಮುಖ್ಯಸ್ಥ ಪರ್ವೇಜ್ ಮುಷರಫ್ ಅವರ ಹೇಳಿಕೆಗಳು ಯುದ್ಧದಲ್ಲಿ ಅವರ ಪಾಲ್ಗೊಳ್ಳುವಿಕೆಯನ್ನು ಸ್ಪಷ್ಟವಾಗಿ ಹೇಳಿದ್ದವು. ಭಾರತವು ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಂಡು ಪಾಕಿಸ್ತಾನದ ವಿರುದ್ಧ ಆಪರೇಷನ್ ವಿಜಯ್‌ಗಾಗಿ 20,000 ಸೈನಿಕರನ್ನು ಕಳುಹಿಸಿತು.

ನಿರ್ಣಾಯಕ ಸ್ಥಳಗಳಲ್ಲಿ ಪಾಕಿಸ್ತಾನಿ ಸೈನಿಕರು ನೆಲೆಸುವ ಮೂಲಕ ಪಾಕಿಸ್ತಾನವು ಭಾರತದ ನಿಯಂತ್ರಿತ ಪ್ರದೇಶಗಳಲ್ಲಿನ ವಿವಿಧ ಆಯಕಟ್ಟಿನ ಸ್ಥಳಗಳನ್ನು ವಶಪಡಿಸಿಕೊಂಡಿತು. ಯುದ್ಧದ ಎರಡನೇ ಹಂತದಲ್ಲಿ ಯುದ್ಧತಂತ್ರದ ಸಾರಿಗೆ ಮಾರ್ಗಗಳನ್ನು ವಶಪಡಿಸಿಕೊಳ್ಳುವ ಮೂಲಕ ಭಾರತವು ದಿಟ್ಟ ಹೆಜ್ಜೆಯಿಟ್ಟಿತು. ಭಾರತವು ವಾಯುಪಡೆಯನ್ನು ಕೂಡ ಯುದ್ಧದಲ್ಲಿ ಬಳಸುವ ಮೂಲಕ ಅಂತಿಮ ಹಂತದಲ್ಲಿ ಜು.26ರಂದು ಪಾಕ್ ಸೈನಿಕರ ವಿರುದ್ಧ ಗೆದ್ದಿತು.

ಈ ಯುದ್ಧದಲ್ಲಿ ಭಾರತದ ನೂರಾರು ವೀರ ಯೋಧರು ಮಡಿದರು. ಅವರನ್ನು ಗೌರವಿಸುವ ನಿಟ್ಟಿನಲ್ಲಿ ಜು.26ರಂದು ಕಾರ್ಗಿಲ್ ವಿಜಯ್ ದಿವಸ್ ಆಚರಿಸಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!