ಹೊಸದಿಗಂತ ಮಂಗಳೂರು:
ಪ್ರಯಾಣದ ಸಂದರ್ಭ ಬಸ್ನಲ್ಲಿ ಕಳೆದುಕೊಂಡ ನಾಲ್ಕೂವರೆ ಲಕ್ಷ ರೂ. ಮೌಲ್ಯದ ವಜ್ರದ ಕರಿಮಣಿ ಸರ ಬಸ್ ಸಿಬ್ಬಂದಿಯ ಪ್ರಾಮಾಣಿಕತೆಯಿಂದಾಗಿ ಮತ್ತೆ ವಾರಸುದಾರರನ್ನು ಸೇರಿದ ಘಟನೆ ಉಡುಪಿಯ ಮಣಿಪಾಲದಲ್ಲಿ ನಡೆದಿದೆ.
ಮಣಿಪಾಲ ಮೂಲದ ದಂಪತಿ ಖಾಸಗಿ ಬಸ್ನಲ್ಲಿ ಮಣಿಪಾಲದಿಂದ ಮಂಗಳೂರಿಗೆ ತೆರಳಿದ್ದು, ಮಂಗಳೂರು ತಲುಪಿದಾಗ ಆಭರಣ ಬಸ್ನಲ್ಲಿ ಕಳೆದುಕೊಂಡಿರುವುದು ಗೊತ್ತಾಗಿತ್ತು. ಇತ್ತ ಬಸ್ನಲ್ಲಿ ಪತ್ತೆಯಾದ ಆಭರಣವನ್ನು ಜೋಪಾನವಾಗಿ ತೆಗೆದಿರಿಸಿದ್ದ ಸಿಬ್ಬಂದಿ ವಾರಸುದಾರರ ನಿರೀಕ್ಷೆಯಲ್ಲಿದ್ದರು.
ಇದೇ ವೇಳೆ ದಂಪತಿ ಬಸ್ ಟಿಕೇಟ್ನಲ್ಲಿದ್ದ ಸಂಖ್ಯೆಗೆ ಕರೆಮಾಡಿದ್ದು, ಸೂಕ್ತ ಗುರುತು, ದಾಖಲೆ ನೀಡಿದರೆ ಆಭರಣ ವಾಪಸ್ ಮಾಡುವುದದಾಗಿ ಸಿಬ್ಬಂದಿ ತಿಳಿಸಿದ್ದರು. ಅದರಂತೆ ಮತ್ತೆ ಮಣಿಪಾಲಕ್ಕೆ ವಾಪಸ್ ಬಂದ ದಂಪತಿ ದಾಖಲೆ ತೋರಿಸಿ ಆಭರಣವನ್ನು ಪಡೆದುಕೊಂಡಿದ್ದಾರೆ. ಬಸ್ ಸಿಬ್ಬಂದಿಗಳ ಪ್ರಾಮಾಣಿಕತೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.