ಹೊಸದಿಗಂತ ವರದಿ, ಮಂಗಳೂರು:
ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಸಂಜೆ ಯುವತಿಯನ್ನು ಅಪಹರಿಸಿ ಅತ್ಯಾಚಾರ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಕೆ ಅರುಣ್ ತಿಳಿಸಿದ್ದಾರೆ.
ಪ್ರಕರಣದ ಆರೋಪಿಗಳಾದ ಅಲ್ತಾಫ್ ಹಾಗೂ ಸವೇರಾ ರಿಚರ್ಡ್ ಕಾರ್ಡೋಸಾ ಎಂಬಾತನನ್ನು ಈಗಾಗಲೇ ಬಂದಿಸಲಾಗಿದ್ದು , ಇವರು ಕೃತ್ಯಕ್ಕೆ ಬಳಸಿದ ಎರಡು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಸಂತ್ರಸ್ತೆ ಮತ್ತು ಆರೋಪಿ ಅಲ್ತಾಫ್ ಮೂರು ತಿಂಗಳ ಹಿಂದೆ ಇನ್ನಾ ಗ್ರಾಮ್ ಮೂಲಕ ಪರಸ್ಪರ ಪರಿಚಯವಾಗಿದ್ದು, ಅಲ್ತಾಫ್ ಶುಕ್ರವಾರ ಸಂತ್ರಸ್ತರಿಗೆ ಕರೆ ಮಾಡಿ ಒಂದು ಕಡೆಗೆ ಬರಲು ತಿಳಿಸಿದ್ದನು. ಅದರಂತೆ ಅಲ್ಲಿಗೆ ಹೋದ ಸಂತ್ರಸ್ತೆಯನ್ನು ಆರೋಪಿ ಅಪಹರಿಸಿಕೊಂಡು ಹೋಗಿ ಅಲ್ಲಿ ಅಲ್ತಾಫ್ ಡ್ರಿಂಕ್ಸ್ ನಲ್ಲಿ ಮತ್ತು ಬರಿಸುವ ಪದಾರ್ಥವನ್ನು ಬೆರೆಸಿ ಕೊಟ್ಟಿದ್ದು ಆ ಸಂದರ್ಭದಲ್ಲಿ ಆತ ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಸಂತ್ರಸ್ತ ಯುವತಿ ದೂರಿನಲ್ಲಿ ತಿಳಿಸಿದ್ದಾರೆ.
ಕೃತ್ಯ ಎಸಗಿದ ಬಳಿಕ ಆರೋಪಿ ಅಲ್ತಾಫ್ ಆತನ ಕಾರಿನಲ್ಲಿ ಸಂತ್ರಸ್ತ ಯುವತಿಯನ್ನು ಆಕೆಯ ಮನೆ ಬಳಿ ಬಿಟ್ಟು ಹೋಗಿದ್ದಾನೆ. ತೀವ್ರವಾಗಿ ಅಸ್ವಸ್ಥಗೊಂಡಿರುವ ಯುವತಿಯನ್ನು ಕಾರ್ಕಳ ಆಸ್ಪತ್ರೆಯಿಂದ ಮಣಿಪಾಲ ಆಸ್ಪತ್ರೆಗೆ ವರ್ಗಾಯಿಸಲಾಗಿದೆ.
ಈ ಪ್ರಕರಣದ ಕಾನೂನು ಪ್ರಕ್ರಿಯೆಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಕ್ರಮ ಜರುಗಿಸಲಾಗುವುದು. ಅಲ್ಲದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಕೆಲವು ಸುಳ್ಳು ಸುದ್ದಿಗಳು ಹರಿದಾಡುತ್ತಿದ್ದು, ಇದರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್.ಪಿ ಡಾ. ಕೆ ಅರುಣ್ ತಿಳಿಸಿದ್ದಾರೆ.