ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗಷ್ಟೇ ಮುಕ್ತಾಯವಾದ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಎದುರಾಳಿ ನಾಯಕ ಬೆನ್ ಸ್ಟೋಕ್ಸ್ ನೀಡಿದ ಹೇಳಿಕೆಗೆ ಟೀಂ ಇಂಡಿಯಾ ಮಾಜಿ ಆಟಗಾರ ಆರ್. ಅಶ್ವಿನ್ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. “ಆಟಗಾರರು ಗಾಯಗೊಂಡಾಗ ಬದಲಿಗೆ ಮತ್ತೊಬ್ಬನಿಗೆ ಅವಕಾಶ ನೀಡಬೇಕೆಂಬ ಕೋಚ್ ಗೌತಮ್ ಗಂಭೀರ್ ಅವರ ಸಲಹೆ ಹಾಸ್ಯಾಸ್ಪದ” ಎಂದು ಸ್ಟೋಕ್ಸ್ ವ್ಯಂಗ್ಯವಾಡಿದ್ದಕ್ಕೆ, ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ತಿರುಗೇಟು ನೀಡಿದ್ದಾರೆ.
“ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುವ ಹಕ್ಕು ಇದೆ. ಆದರೆ ‘ಹಾಸ್ಯಾಸ್ಪದ’ ಎಂಬ ಪದ ಬಳಸುವುದು ಗೌರವಪೂರ್ಣವಲ್ಲ. ಮಾತನಾಡುವುದಕ್ಕೂ ಮೊದಲು ಯೋಚಿಸಿ. ಕರ್ಮ ಎಂದರೆ ಯಾವುದೆಂದು ಎಲ್ಲರೂ ಅರಿಯಬೇಕು. ಅದು ಯಾರನ್ನೂ ಬಿಡುವುದಿಲ್ಲ” ಎಂದು ಕಿಡಿಕಾರಿದ್ದಾರೆ.
ಇಂಗ್ಲೆಂಡ್ ತಂಡಕ್ಕೆ ಕೊನೆಯ ಟೆಸ್ಟ್ ಪಂದ್ಯದಲ್ಲಿ ಪ್ರಮುಖ ಆಟಗಾರ ಕ್ರಿಸ್ ವೋಕ್ಸ್ ಗಾಯದಿಂದ ಹೊರಬಿದ್ದಿದ್ದರಿಂದ ದೊಡ್ಡ ಹಿನ್ನಡೆ ಎದುರಾಯಿತು. ಅವರ ಬದಲಿಗೆ ಆಟಗಾರನೊಬ್ಬನನ್ನು ಆಡಿಸಲು ಅವಕಾಶವಿದ್ದರೆ ಇಂಗ್ಲೆಂಡ್ ಗೆ ಬಲವರ್ಧನೆ ಆಗುತ್ತಿತ್ತು ಎಂಬ ಅಭಿಪ್ರಾಯವನ್ನು ಅಶ್ವಿನ್ ಹಂಚಿಕೊಂಡಿದ್ದಾರೆ.
ಈ ಹಿಂದೆ ಸರಣಿಯ ಮೊದಲ ದಿನವೇ ಟೀಂ ಇಂಡಿಯಾದ ರಿಷಭ್ ಪಂತ್ ಗಾಯಗೊಂಡಿದ್ದರು, ವೋಕ್ಸ್ ಅವರ ಬೌಲಿಂಗ್ ವೇಳೆ ಗಾಯವಾಗಿತ್ತು. ಇದೇ ಘಟನೆ ಬೆನ್ನಲ್ಲೇ ಭಾರತ ತಂಡದ ಕೋಚ್ ಗೌತಮ್ ಗಂಭೀರ್, “ಆಟಗಾರರು ನಿಜವಾದ ಗಾಯದಿಂದ ಹೊರಬರುತ್ತಿದ್ದರೆ ತಂಡದ ಹಿತಕ್ಕಾಗಿ ಸಬ್‌ಸ್ಟಿಟ್ಯೂಟ್ ಅನ್ನು ಪರಿಗಣಿಸಬೇಕು” ಎಂಬ ಸಲಹೆ ನೀಡಿದ್ದರು.
ಆದರೆ ಇಂಗ್ಲೆಂಡ್ ನಾಯಕ ಸ್ಟೋಕ್ಸ್ ಈ ಮಾತಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, “ಇದು ಹಾಸ್ಯಾಸ್ಪದ” ಎಂದು ತಿರಸ್ಕರಿಸಿದ್ದರು. ಈ ಮಾತಿಗೆ ತಕ್ಕ ರೀತಿಯಲ್ಲಿ ಅಶ್ವಿನ್ ಈಗ ತಿರುಗೇಟು ನೀಡಿದ್ದಾರೆ.