ನಾಳೆ ಕರ್ನಾಟಕ ಬಂದ್‌: ಥಿಯೇಟರ್‌, ಮಾಲ್‌ ಓಪನ್‌ ಇರೋದು ಡೌಟ್‌! ಯಾವ ಸೇವೆ ಲಭ್ಯ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಗಡಿ ಜಿಲ್ಲೆ ಬೆಳಗಾವಿಯಲ್ಲಿ ಆಗಾಗ ತಗಾದೆ ತೆಗೆಯುತ್ತಿರುವ ಮರಾಠಿ ಸಂಘಟನೆಗಳ ವಿರುದ್ಧ ಮಾರ್ಚ್​ 22ರಂದು ಕರ್ನಾಟಕ ಬಂದ್ ಮಾಡುವ ಮೂಲಕ ಎಚ್ಚರಿಕೆ ನೀಡಲು ಕನ್ನಡ ಪರ ಸಂಘಟನೆಗಳು ಸಜ್ಜಾಗಿವೆ.

ಮಾರ್ಚ್ 22ರಂದು ಬೆಳಗ್ಗೆ 6ರಿಂದ ಸಂಜೆ 6 ಗಂಟೆಯವರೆಗೆ ರಾಜ್ಯಾದ್ಯಂತ ಬಂದ್ ಆಚರಿಸಲು ಉದ್ದೇಶಿಸಲಾಗಿದೆ. ಮತ್ತು ಈ ಬಂದ್‌ಗೆ ಬೆಂಬಲ ನೀಡುವಂತೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಮನವಿ ಮಾಡಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಗೆ ಬಂದ್ ಬಿಸಿ ತಟ್ಟುವುದು ಖಚಿತವಾಗಿದೆ. ಬಂದ್ ಸಂದರ್ಭದಲ್ಲಿ ಸಾರಿಗೆ ಸೇವೆಗಳಾದ ಬಸ್, ಆಟೋ, ಮತ್ತಿತರ ವಾಹನಗಳ ಸಂಚಾರ ನಡೆಸದಂತೆ ಕನ್ನಡಪರ ಸಂಘಟನೆಗಳು ಕರೆ ನೀಡಿವೆ.

ಬಂದ್​​ಗೆ ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ ಬಣ ಬೆಂಬಲ ಸೂಚಿಸಿದೆ. ಹೊಟೇಲ್ ಮಾಲೀಕರ ಸಂಘ ನೈತಿಕ ಬೆಂಬಲ ಮಾತ್ರ ಘೋಷಿಸಿದೆ. ಕರ್ನಾಟಕ ಸಾರಿಗೆ ನೌಕರರ ಒಕ್ಕೂಟ ಬಂದ್​​ಗೆ ಬೆಂಬಲ ನೀಡುವ ಭರವಸೆ ನೀಡಿದೆ. ಕೆಎಸ್​ಆರ್​​ಟಿಸಿ, ಬಿಎಂಟಿಸಿ ನೌಕರರ ಸಂಘದಿಂದ ಕೂಡ ಬೆಂಬಲ ವ್ಯಕ್ತವಾಗಿದೆ. ಉಳಿದಂತೆ ಓಲಾ, ಉಬರ್ ಅಸೋಸಿಯೋಷನ್, ಎಪಿಎಂಸಿ ಸೇರಿ ಕೆಲ ಸಂಘಟನೆಗಳು ಬಂದ್​ಗೆ ಬೆಂಬಲ ನೀಡಲು ಸಜ್ಜಾಗಿವೆ.

ಏನಿರುತ್ತೆ? ಏನಿರಲ್ಲ? ಸಿನಿಮಾ ಥಿಯೇಟರ್, ಚಲನಚಿತ್ರ ವಾಣಿಜ್ಯ ಮಂಡಳಿ, ಶಾಪಿಂಗ್ ಮಾಲ್‌ಗಳು, ಬೇಕರಿ, ಬಾರ್ ಅಂಡ್ ರೆಸ್ಟೋರೆಂಟ್, ಅಂಗಡಿ‌, ಬೀದಿಬದಿ ವ್ಯಾಪಾರಿಗಳಿಂದ ಬಂದ್​ಗೆ ಭಾಗಶಃ ಬೆಂಬಲ ವ್ಯಕ್ತವಾಗಿದೆ. ಹೀಗಾಗಿ ಈ ಸೇವೆ ಅಲಭ್ಯವಾಗುವ ಸಾಧ್ಯತೆ ಇದೆ. ಮೆಟ್ರೋ ಸೇವೆಯ ಕುರಿತು ಅಧಿಕೃತ ಮಾಹಿತಿ ಲಭ್ಯವಾಗಬೇಕಿದೆ. ಆಸ್ಪತ್ರೆ, ವೈದ್ಯಕೀಯ ಸೇವೆ, ಹಾಲು, ಅಗತ್ಯ ವಸ್ತುಗಳ ಮಾರಾಟ ಎಂದಿನಂತಿರಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!